ಹೈದರಾಬಾದ್, ಮೇ.14: ಬಿಜೆಪಿ ಹೈದರಾಬಾದ್ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಬಿಜೆಪಿಯ ಹೈದರಾಬಾದ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಮತಗಟ್ಟೆಯೊಂದರಲ್ಲಿ ಬುರ್ಖ ಧರಿಸಿದ್ದ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಅವರಿಗೆ ಮುಖ ತೋರಿಸುವಂತೆ ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿದ ತಕ್ಷಣ ಅಂದರೆ ಸೋಮವಾರವೇ ಎಐಎಂಐಎ ಪಕ್ಷದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಹೈದರಾಬಾದ್ ಲೋಕಸಭಾ ಕ್ಷೇತ್ರ ಅಮೃತ ವಿದ್ಯಾಲಯದಲ್ಲಿ ಮತದಾನ ಮಾಡಿದ ನಂತರ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಆಝಂಪುರ್ ಮತಗಟ್ಟೆಗೆ ಆಗಮಿಸಿದ ಮಾಧವಿ ಲತಾ ಮತದಾನಕ್ಕೆ ಕಾದಿದ್ದ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿದರು ಜತೆಗೆ ಬುರ್ಖ ಧರಿಸಿದ್ದ ಮಹಿಳೆಯರಿಗೆ ಮುಖ ತೋರಿಸುವಂತೆ ಹೇಳುವ ಮತ್ತು ಅವರು ಮುಖ ತೋರುವಂತಿರುವ ವೀಡಿಯೋ ವೈರಲ್ ಆಗಿದೆ.
ಹೈದರಾಬಾದ್ ಎಲ್ ಎಸ್ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್, ರೊನಾಲ್ಡ್ ರೋಸ್ ಅವರ ನಿರ್ದೇಶನದ ಮೇಲೆ, ಮಲಕ್ ಪೇಟೆ ಪೊಲೀಸರು ಮಾಧವಿ ಲತಾ ವಿರುದ್ಧ ಸೆಕ್ಷನ್ 171 ಸಿ (ಚುನಾವಣಾ ಹಕ್ಕನ್ನು ಚಲಾಯಿಸುವಲ್ಲಿ ಸ್ವಯಂಪ್ರೇರಿತವಾಗಿ ಹಸ್ತಕ್ಷೇಪ) 186 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.