Mon. Dec 23rd, 2024

ಪೊಲೀಸ್‌ ಇಲಾಖೆ ಸತ್ತಿದೆಯೋ, ಬದುಕಿದೆಯೋ:ಆರ್.ಅಶೋಕ್ ಪ್ರಶ್ನೆ

Share this with Friends

ಮೈಸೂರು,ಮೇ.16: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾದ ಒಂದು ತಿಂಗಳಲ್ಲೇ ಅಂಜಲಿ ಎಂಬ ಯುವತಿ ಕೊಲೆಯಾಗಿದೆ, ಪೊಲೀಸ್‌ ಇಲಾಖೆ ಸತ್ತಿದೆಯೋ, ಬದುಕಿದೆಯೋ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಸರಣಿಯಾಗಿ ಕೊಲೆಯಾಗುತ್ತಿದ್ದಾರೆ. ಇದರ ಜೊತೆಗೆ ಲವ್‌ ಜಿಹಾದ್‌ ಕೂಡ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಕಿಡಿಕಾರಿದರು.

ಬರಗಾಲದಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಐದು ವರ್ಷವೂ ಬರಗಾಲ ಬಂದಿತ್ತು. ಬರಗಾಲದ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ತಮ್ಮ ಪಾಲಿನ ಹಣವಾಗಿ ಒಂದು ಪೈಸೆಯನ್ನೂ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ 3 ಕೋಟಿ ರೂಪಾಯಿ ಆಸ್ತಿ ಇದೆ. ಆದರೆ ಡಿ.ಕೆ.ಶಿವಕುಮಾರ್ ಅವರ ಆಸ್ತಿ ಹೆಚ್ಚಾಗಿದೆ. ಹಾಲಿನ ಪ್ರೋತ್ಸಾಹಧನ 700 ಕೋಟಿ ರೂ‌. ಉಳಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಚಾಲಕರು, ಗುತ್ತಿಗೆ ಸಿಬ್ಬಂದಿಗೆ ಸಂಬಳ ಪಾವತಿಯಾಗಿಲ್ಲ. ಕೇರಳಕ್ಕೆ ಬಂದ ಪರಿಸ್ಥಿತಿಯೇ ಇನ್ನು ಕರ್ನಾಟಕಕ್ಕೆ ಬರಲಿದೆ.

ಪಾಕಿಸ್ತಾನದಲ್ಲಿ ಅಕ್ಕಿ, ಬೇಳೆ, ಗೋಧಿ ಬೆಲೆ 2 ಸಾವಿರ ರೂ.ಗೆ ತಲುಪಿದೆ, ಚಹ ಕುಡಿದರೆ 500 ರೂ. ಕೊಡಬೇಕು, ಸಿದ್ದರಾಮಯ್ಯನವರ ಸರ್ಕಾರ ಇನ್ನೂ ಇದ್ದರೆ ಪಾಕಿಸ್ತಾನದ ಆರ್ಥಿಕತೆ ಕರ್ನಾಟಕಕ್ಕೂ ಬರಲಿದೆ ಎಂದು ಅಶೋಕ್ ಭವಿಷ್ಯ ನುಡಿದರು.

ಈಗ ವಿಧಾನಪರಿಷತ್ ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ ವಿದ್ಯಾವಂತರೇ ಇದ್ದಾರೆ. ಇದು ಕೈ ಮುಗಿದುಕೊಂಡು ಕೇಳುವ ಮತದಾನ ಅಲ್ಲ. ಎಲ್ಲರನ್ನೂ ಸಂಪರ್ಕಿಸಿ ಮನ ಒಲಿಸಬೇಕಾಗುತ್ತದೆ. ನಾವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ, ಬಿಜೆಪಿ ಅಭ್ಯರ್ಥಿ ನಾಳೆ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಅಶೋಕ್ ತಿಳಿಸಿದರು.


Share this with Friends

Related Post