Tue. Dec 24th, 2024

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಂಗವಾಗಿ ನೆರವೇರಿದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ

Share this with Friends

ಮೈಸೂರು, ಮೇ.19: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25 ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು.

ಮೈಸೂರು ಸೇರಿದಂತೆ‌ ರಾಜ್ಯ,ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು ಸತ್ಯನಾರಾಯಣ ‌ವ್ರತದಲ್ಲಿ ಪಾಲ್ಗೊಂಡಿದ್ದರು.

ಇಂದು ಬೆಳಿಗ್ಗೆ ಗಣಪತಿ ಹೋಮ ನಂತರ ಸತ್ಯನಾರಾಯಣ ವ್ರತವನ್ನು ಪ್ರಾರಂಭಿಸಲಾಯಿತು.

ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸಿ ಈ ಸಾಮೂಹಿಕ ಸತ್ಯನಾರಾಯಣ ಪೂಜಾ‌ಕಾರ್ಯಕ್ಕೆ ಚಾಲನೆ ನೀಡಿದರು,ಗಣಪತಿ ಸಚ್ಚಿದಾನಂದ ಆಶ್ರಮದ ಋಗ್ವೇದ ಅಧ್ಯಾಪಕರಾದ ಸಂತೋಷ್‌ ಘನಪಾಟಿ ಮತ್ತು ಅವರ ಶಿಷ್ಯರ ನೇತೃತ್ವದಲ್ಲಿ ಶ್ರೀ‌ ಸತ್ಯನಾರಾಯಣ ವ್ರತ ನೆರವೇರಿತು.

ಅವಧೂತ ದತ್ತಪೀಠದ ವತಿಯಿಂದಲೇ ಉಚಿತವಾಗಿ ಸತ್ಯನಾರಾಯಣ ‌ವ್ರತವನ್ನು ಶಾಸ್ತ್ರೋಕ್ತವಾಗಿ ಏರ್ಪಡಿಸಿದ್ದಲ್ಲದೆ ಈ ವ್ರತಕ್ಕೆ ಬೇಕಾದಂತಹ‌ ಸಕಲ ಪೂಜಾ‌ ಸಾಮಗ್ರಿಗಳು ಮತ್ತು ಪ್ರಸಾದವನ್ನು ಕೂಡಾ‌ ಉಚಿತವಾಗಿ ನೀಡಿದ್ದುದು ನಿಜಕ್ಕೂ ವಿಶೇಷ.

ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ,ಶ್ರೀ ಸತ್ಯನಾರಾಯಣ ವ್ರತ ಮಾಡುವುದರಿಂದ ಮನುಷ್ಯರ ದುಃಖ, ಕಷ್ಟ ಕೋಟಲೆ ದೂರವಾಗಲಿದೆ ಎಂದು ನುಡಿದರು.

ಸಂಸಾರದಲ್ಲಿ ಸುಖ,ದುಃಖ ಎರಡೂ ಇರಬೇಕು,ಸದಾ ಸತ್ಯವನ್ನೆ ನುಡಿಯಬೇಕು ಸಾಧ್ಯವಾದಷ್ಟೂ ಒಳಿತನ್ನೇ ಮಾಡಬೇಕು ಎಂದು ಹೇಳಿದರು.

ಪ್ರಪಂಚದಲ್ಲಿ ನಮ್ಮ ಆಶ್ರಮಗಳು ಬಹಳಷ್ಟು ಇವೆ, ಆದರೆ ನನಗೆ ನಮ್ಮ ಮೈಸೂರಿನ ಕಾವೇರಿ ನದಿ ಬಿಟ್ಟು ಹೋಗಲು ಮನಸ್ಸಿಲ್ಲ ಆದರೆ ಕೆಲವರು ಕಾವೇರಿ ನದಿಯಲ್ಲಿ ನೀರೆ ಇಲ್ಲ ಎನ್ನುತ್ತಾರೆ, ಈಗ ಒಳ್ಳೆಯ ಮಳೆ ಆಗುತ್ತಿದೆ ಕಷ್ಟಗಳು ದೂರವಾಗಲಿವೆ ಎಂದು ಸ್ವಾಮೀಜಿ ತಿಳಿಸಿದರು.

ಪ್ರತಿ ವರ್ಷ ಈ ರೀತಿಯ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಬೇಕೆಂಬುದು ನನ್ನ ಮಹಾದಾಸೆ ಹಾಗೂ ಆಶ್ರಮದಲ್ಲಿ ಪ್ರತಿದಿನ ಸಂಜೆ ಸತ್ಸಂಗ ನಡೆಯಬೇಕು ಎಂಬ ಆಶಯವಿದೆ
ಇದೆಲ್ಲದರಲ್ಲೂ ಭಕ್ತರು ಭಾಗವಹಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

ಹಿಂದುಗಳಲ್ಲಿ ಹಣೆಗೆ ಕುಂಕುಮದ ಬೊಟ್ಟು ಇಡುವ ಅಭ್ಯಾಸವಿದೆ, ಇದು ಅತ್ಯಂತ ಒಳ್ಳೆಯ ಪದ್ಧತಿ, ಕುಂಕುಮವನ್ನು ಹಣೆಯಲ್ಲಿ ಇಡುವುದರಿಂದ ಸದಾ ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎಂದು ಶ್ರೀಗಳು ಇದೇ ವೇಳೆ ಸಲಹೆ ನೀಡಿದರು.

ಇಂದು ಸಂಜೆ 6.30ಕ್ಕೆ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಪುಷ್ಪಾಲಂಕಾರ,ಶೇಷ ವಾಹನೋತ್ಸವ,ಶಾಂತಿ ಪಾಠ ಮತ್ತು ಶ್ರೀ ದತ್ತ‌ ವೆಂಕಟೇಶ್ವರ ಕ್ಷೇತ್ರದ ರಜತ ಮಹೋತ್ಸವ ಉದ್ಘಾಟನೆ ನಡೆಯಲಿದೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಸುತ್ತೂರು ಮಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮತ್ತು ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದ‌ ತೀರ್ಥ ಸ್ವಾಮೀಜಿ ವಹಿಸುವರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ 26 ನೇ ವಾರ್ಷಿಕೋತ್ಸವ ಕೂಡಾ ನಡೆಯಲಿದ್ದು ಇದರ ಪ್ರಯುಕ್ತ ಅವಧೂತ ದತ್ತ ಪೀಠದಲ್ಲಿ ಇಂದಿನಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿವೆ.

ಮೇ.20 ರಿಂದ 28 ರವರೆಗೂ ಆಶ್ರಮದಲ್ಲಿ‌ ಪ್ರತಿದಿನ ಶ್ರೀಚಕ್ರಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


Share this with Friends

Related Post