Fri. Dec 27th, 2024

ಕುಕ್ಕರಹಳ್ಳಿ ಕೆರೆಗೆ ಕಾಯಕಲ್ಪ:ಡಾ. ಕೆ ವಿ ರಾಜೇಂದ್ರ

Share this with Friends

ಮೈಸೂರು,ಮೇ.20: ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿ ಡಾ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಈ ಕಾರ್ಯವನ್ನು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆಗೆ ವಹಿಸಿದ್ದು ಜೂನ್ ಅಂತ್ಯದೊಳಗೆ ವರದಿ ನೀಡುವಂತೆ ಸಲಹೆ ನೀಡಿದರು.

ಸೋಮವಾರ ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕುಕ್ಕರಹಳ್ಳಿ ಕೆರೆ ಯೋಜನಾ ಅನುಷ್ಠಾನ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಳ್ಳಿ ಕೆರೆಯ ವೀಕ್ಷಣೆಗೆ ಪ್ರತಿದಿನವೂ ಸಾವಿರಾರು ಜನರು ಬರುತ್ತಾರೆ, ಅಂತಹ ಸ್ಥಳವನ್ನು ಸದಾ ಸ್ವಚ್ಛ ಹಾಗೂ ಸುಂದರವಾಗಿ ಇರುವಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಕುಕ್ಕರಳ್ಳಿ ಕೆರೆಯ ಸುತ್ತ ಇರುವ ಅನಧಿಕೃತ ಒಳ ಚರಂಡಿಗಳನ್ನು ಮುಚ್ಚಿಸಿ ಅಲ್ಲಿಂದ ಕೆರೆ ನೀರಿಗೆ ಬರುತ್ತಿದ್ದ ಕೊಳಚೆ ನೀರನ್ನು ತಡೆಗಟ್ಟಬೇಕು, ಶುದ್ಧ ನೀರನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕುಕ್ಕರಳ್ಳಿ ಕೆರೆ ವ್ಯಾಪ್ತಿಯಲ್ಲಿ ಕೆಲವು ಕಡೆ ಕಸದ ರಾಶಿ ಕಂಡುಬರುತ್ತಿದ್ದು,ತಕ್ಷಣವೇ ಅದನ್ನು ತೆರವುಗೊಳಿಸಬೇಕು,ಆ ಸ್ಥಳಗಳಲ್ಲಿ ಪಾರ್ಕ್, ಕೂರಲು ಹಾಸನದ ವ್ಯವಸ್ಥೆ ಮಾಡಿ, ಜನರಿಗೆ ಸಹಾಯವಾಗುವಂತೆ ಮಾರ್ಪಡಿಸಬೇಕು ಎಂದು ತಿಳಿಸಿದರು.

ಸುತ್ತ-ಮುತ್ತಲಿನ ಶಬ್ದ ಮಾಲಿನ್ಯದಿಂದ ಕೆರೆಯ ಒಳಗಿರುವ ಪ್ರಾಣಿ-ಪಕ್ಷಿಗಳಿಗೆ ತೊಂದರೆ‌ ಆಗುತ್ತಿದ್ದು,ಅದನ್ನು ತಡೆಯಲು ಸಾರ್ವಜನಿಕರಿಗೆ ಸೂಚನಾ ಫಲಕಗಳ ಮೂಲಕ ಮಾಹಿತಿ ನೀಡಿ ಶಬ್ದವನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ರಾಜೇಂದ್ರ ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಡಾ. ಎನ್. ಎನ್ ಮಧು, ಮೂಡ ಆಯುಕ್ತ ದಿನೇಶ್, ಇಂಟ್ಯಾಕ್ ಸಂಸ್ಥೆಯ ಅಧಿಕಾರಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು,ಮೈಸೂರು ಪರಂಪರೆ ಸಮಿತಿಯ ಸದಸ್ಯರು, ಮೈಸೂರು ವಿವಿ ಕುಕ್ಕರಹಳ್ಳಿ ಕೆರೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Share this with Friends

Related Post