Fri. Nov 1st, 2024

ಪ್ರಜ್ವಲ್‌ ರೇವಣ್ಣ ಪೆನ್ ಡ್ರೈವ್ ಪ್ರಕರಣ:ಡಿಕೆಶಿ ಪರ ಸಿಎಂ ಬ್ಯಾಟಿಂಗ್

Share this with Friends

ಮೈಸೂರು, ಮೇ.24: ಸಂಸದ ಪ್ರಜ್ವಲ್‌ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಒಳಪಡಿಸಿ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದು, ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರವನ್ನು ಡೈವರ್ಟ್ ಮಾಡಲು ಕುಮಾರಸ್ವಾಮಿ ಅವರು ಡಿಕೆಶಿ ಹೆಸರು ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಪ್ರಜ್ವಲ್‌ ರೇವಣ್ಣ ಅಪರಾಧಿ ಅಲ್ಲ ಆರೋಪಿ ಅಂತ ಹೇಳಿದ್ದಾರೆ, ನಾನೂ ಕೂಡಾ ಆರೋಪಿ ಅಂತಾನೆ ಹೇಳುತ್ತಿರುವುದು ಎಂದು ಹೇಳಿದರು.

ದೇವೇಗೌಡರ ಕುಟುಂಬದಿಂದ ಪ್ರಜ್ವಲ್ ಹೊರಹಾಕುವ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸಿಎಂ, ದೇವೇಗೌಡರು ಹಾಗೂ ಅವರ‌ ಮನೆಯವರಿಗೆ ಗೊತ್ತಿಲ್ಲದೇ ಮನೆಯಿಂದ ಹೋಗಿದ್ದಾನಾ ಪ್ರಜ್ವಲ್?, ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ಲವಾ, ಪ್ರಜ್ವಲ್ ಪರ ಪ್ರಚಾರಕ್ಕೆ ಹೋದಾಗ ನನ್ನ ಮಗ ಎಂದಿದ್ದರು, ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೇನೆ ಅಲ್ವ, ಪ್ರಜ್ವಲ್ ವಿಚಾರ ಎಲ್ಲಾ ಅವರ ಕುಟುಂಬಕ್ಕೆ ಗೊತ್ತಿದೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣ ಕುರಿತು ಒಂದಲ್ಲ , ಎರಡು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೇನೆ, ಒಬ್ಬ ಸಿಎಂ ಪ್ರಧಾನಿಗೆ ಪತ್ರ ಬರೆದರೆ ಉತ್ತರ ಕೊಡಬೇಕಿತ್ತು, ಆದರೆ ಅವರು ಉತ್ತರ ಕೊಡುವ ಕೆಲಸ ಮಾಡಿಲ್ಲ, ಯಾಕೆ‌ ಕೊಟ್ಟಿಲ್ಲ ಎಂಬುದನ್ನು ನೀವು ಅವರನ್ನೇ ಕೇಳಿ,ಇಲ್ಲಾ ಸಚಿವ ಪ್ರಹ್ಲಾದ್ ಜೋಶಿಯನ್ನು ಕೇಳಿ ಎಂದು ಹೇಳಿದರು.

ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಟಿಕೆಟ್ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ವರಿಷ್ಠರು ಏನು ಮಾಡುತ್ತಾರೊ ಗೊತ್ತಿಲ್ಲ‌ ಎಂದು ಉತ್ತರಿಸಿದರು.

ನಾನು ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ,ಹೈಕಮಾಂಡ್ ಕೋಲಾರ ಬೇಡ ವರುಣಾದಿಂದ ಸ್ಪರ್ಧೆ ಮಾಡಿ ಎಂದು ಸೂಚಿಸಿದರು, ಆಗ ಯತೀಂದ್ರ ಶಾಸಕರಾಗಿದ್ದರು,ಹೈಕಮಾಂಡ್ ಯತೀಂದ್ರಗೆ ಸೀಟು ಬಿಟ್ಟುಕೊಡಿ ಮುಂದೆ ನಿಮ್ಮನ್ನ ಎಂಎಲ್ ಸಿ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಈಗ ಅವರು ಏನು ಮಾಡುತ್ತಾರೆ ಅಂತ ಗೊತ್ತಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿಗೆ ಚುನಾವಣೆ ನಡೆಸಲು ನಾವು ತಯಾರಿದ್ದೇವೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಚುನಾವಣೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ,ಮೊದಲು ಕ್ಷೇತ್ರ ಪುನರ್ ವಿಂಗಡಣೆ ಆಗಲಿದೆ ನಂತರ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


Share this with Friends

Related Post