Tue. Dec 24th, 2024

ವೈಭವದ ಮಾರೇಹಳ್ಳಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ

Share this with Friends

ಮಳವಳ್ಳಿ,ಮೇ26: ಪಟ್ಟಣದ ಹೊರವಲಯಾದ ಮಾರೇಹಳ್ಳಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನೆರವೇರಿತು.

ದಿವ್ಯ ಬ್ರಹ್ಮ ರಥೋತ್ಸವದ ಅಂಗವಾಗಿ ಮಾರೇಹಳ್ಳಿಯಲ್ಲಿ ವಿರಾಜಮಾನರಾಗಿ ಗಜಾರಣ್ಯ ಕ್ಷೇತ್ರದಲ್ಲಿ ಕಲ್ಯಾಣಗುಣ ಪರಿಪೂರ್ಣನಾಗಿ, ಭಕ್ತಾನುಗ್ರಾಹಕನಾಗಿ ವೀರಾಜಿಸುತ್ತಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯವರಿಗೆ ಹೋಮ ಹವನ ಅಭಿಷೇಕ ನಡೆಯಿತು.

ಬಳಿಕ ವಿವಿಧ ಹೂಗಳಿಂದ ಆಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳಿಂದ ನೆರೆವೇರಿಸಲಾಯಿತು.

ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ವಿವಿಧ ಬಣ್ಣದ ಬಟ್ಟೆ ಹಾಗೂ ಹೂಗಳಿಂದ ಆಲಂಕರಿಸಲಾಗಿತ್ತು. ಶ್ರೀಲಕ್ಷ್ಮಿನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದ ಸಮೀಪ ಕರೆತರಲಾಯಿತು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬ್ರಹ್ಮರಥಕ್ಕೆ ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಪಿ.ಎಂ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ‌ ವೇಳೆ ಮಾತನಾಡಿದ ಶಾಸಕರು, ಶ್ರೀ ಲಕ್ಷ್ಮಿನರಸಿಂಹಸ್ವಾಮಿಯು ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ, ನಾಡಿಗೆ ಮಳೆ ಬೆಳೆ ಸಮೃದ್ದಿಯಾಗಲಿ, ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿದರು.

ಚಾಮರಾಜನಗರ, ಬೆಂಗಳೂರು, ಮೈಸೂರು, ಕೆ.ಆ‌ರ್ ನಗರ, ಮಂಡ್ಯ, ಹಾಸನ, ಬೈರಾಪಟ್ಟಣ, ತಮಿಳುನಾಡು, ತೆಲಾಂಗಣ, ಅಂದ್ರಪ್ರದೇಶ ಸೇರಿದಂತೆ ವಿವಿಧ ನಗರ, ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವಕ್ಕೆ ಹಣ್ಣು ಜವನ ಎಸೆದು ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಧನ್ಯತೆ ಮೆರೆದರು.

ವಿಶೇಷವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ರಥಕ್ಕೆ ಹಣ್ಣು ಜವನ ಎಸೆದರು.

ದೇವಸ್ಥಾನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಹರಕೆವೊತ್ತ ಭಕ್ತರು ಪ್ರಸಾಧ ವಿತರಿಸಿದರು. ಸೇವಾರ್ಥಗಾರರಿಂದ ಪುಷ್ಪಲಂಕಾರ,ಯಾದಾನ ಮಂಟಪೋತ್ಸವ, ನಿವೇದನ ಕಾರ್ಯಕ್ರಮಗಳು ನಡೆದರು.

ಜಾತ್ರೆಯಲ್ಲಿ ಮಾವು,ಹಲಸು, ತಿಂಡಿ ತಿಸಿಸು, ಮಕ್ಕಳ ಆಟದ ವಸ್ತುಗಳು, ಪೂಜಾ ಸಾಮಾಗ್ರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು, ಅಹಿತರ ಘಟನೆ ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಗ್ರೇಡ್೨ ತಹಶೀಲ್ದಾ‌ರ್ ಕುಮಾ‌ರ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಜರಿದ್ದರು.

ತಹಸೀಲ್ದಾರ್ ಲೋಕೇಶ್ ಮಾತನಾಡಿ,
ಹಬ್ಬಗಳು ಮತ್ತು ಜಾತ್ರೆಗಳಲ್ಲಿ ಜನರು ಜಾತಿ-ಭೇದ ಮರೆತು ಒಂದಾಗಿ ಸಡಗರ-ಸಂಭ್ರಮಗಳಿಂದ ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ ಸಮಾಜದಲ್ಲಿ ಶಾಂತಿ- ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಅಂಗವಾಗಿ ಭಕ್ತರಿಗೆ ಉಚಿತ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.


Share this with Friends

Related Post