ನವದೆಹಲಿ,ಫೆ 1: ರಾಜ್ಯದ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡಿದರೆ ಕೇಂದ್ರ ಸರ್ಕಾರ ಈ ಬಾರಿಯ ಕೊನೆಯ ಬಜೆಟ್ ನಲ್ಲಿ 300 ಯೂನಿಟ್ ಉಚಿತ ಸೋಲಾರ್ ವಿದ್ಯುತ್ ಘೋಷಣೆ ಮಾಡಿದೆ.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ನಲ್ಲಿ ಉಚಿತ ಸೋಲಾರ್ ವಿದ್ಯುತ್ ಘೋಷಣೆ ಮಾಡಿದ್ದಾರೆ.ಲೋಕಸಭೆ ಚುನಾವಣೆ ಎದುರಾಗುವುದರಿಂದ ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡಲಾಗಿದೆ.
ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕದಿಂದ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಅವರು ಘೋಷಣೆ ಮಾಡಿದರು.2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಗುರಿ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.
ನೂತನ ಲೋಕಸಭೆಯಲ್ಲಿ ಸುಮಾರು ಒಂದು ಗಂಟೆಯ ಬಜೆಟ್ ಭಾಷಣ ಮಾಡಿದ ಸಚಿವೆ,ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.ಸರ್ಕಾರದ ಯೋಜನೆಗಳಲ್ಲಿ ಯುವಕರು, ಮಹಿಳೆಯರು ಮತ್ತು ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಮೀನುಗಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮೀನುಗಾರಿಕೆಗೆ ಹೊಸ ಸಚಿವಾಲಯವನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದರು.
ಬಜೆಟ್‌ನಲ್ಲಿ ಸಾರಿಗೆ ಕ್ಷೇತ್ರದ ಕುರಿತು ಹಲವು ಪ್ರಸ್ತಾಪಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯ ಕೆಲವು ಯೋಜನೆಗಳ ಕುರಿತು ಸಹ ಪ್ರಸ್ತಾಪಿಸಿದ್ದು, ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ ಎಂದು ನಿರ್ಮಲಾ ತಿಳಿಸಿದರು.ಅನ್ನದಾತ ರಿಗಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ನಿಯತಕಾಲಿಕವಾಗಿ ಮತ್ತು ಸೂಕ್ತವಾಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.ಸರ್ಕಾರಕ್ಕೆ ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯ ಮಾದರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಸರ್ಕಾರವು ವ್ಯವಸ್ಥಿತ ಅಸಮಾನತೆಗಳನ್ನು ನಿವಾರಿಸಲು ಗಮನಹರಿಸುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರಕ್ಕೆ ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಈ ನಾಲ್ವರೂ ಮುಖ್ಯವಾಗಿದೆ, ಇವರ ಅಭಿವೃದ್ಧಿಯಿಂದಲೇ ದೇಶ ಮುನ್ನಡೆಯುತ್ತದೆ ಎಂದು ತಿಳಿಸಿದರು.ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ಎಲ್ಲಾ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಲವು ಮೂಲಸೌಕರ್ಯ ಯೋಜನೆಗಳ ಘೋಷಣೆಗಳು ಹಾಗೂ ಮಧ್ಯಮ ವರ್ಗಕ್ಕೆ ಒಂದಷ್ಟು ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ.ಆರೋಗ್ಯ ಹಾಗೂ ಮೂಲಸೌಕರ್ಯ, ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ.ಕೊನೆಯ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.
7 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಲಭ್ಯತೆ ಮುಂದುವರೆಯಲಿದ್ದು ಹೊಸ ತೆರಿಗೆ ಪದ್ಧತಿಯನ್ನು ಕೂಡಾ ಮುಂದುವರೆಸಲಾಗಿದೆ.ಕಳೆದ 10 ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಮಾಹಿತಿ ನೀಡಿದ್ದಾರೆ.