Mon. Dec 23rd, 2024

ನೋವು ನಿವಾರಕ ಮಾತ್ರೆ ಮಿತ್ರನೇ…? ಶತ್ರುವೇ…?

Share this with Friends

ಪ್ರತಿಯೊಬ್ಬ ಮಾನವನ ಜೀವನದಲ್ಲಿ, ಅದು ತನ್ನ ಮನೆಯೇ ಆಗಿರಲಿ, ಕಚೇರಿಯಾಗಿರಲಿ, ಯಾವುದಾದರೊಂದು ದೂರದ ದೇಶವಾಗಿರಲಿ, ಒಮ್ಮೆಯಾದರೂ ದೇಹಕ್ಕೆ ಸಂಬಂಧಿಸಿದ ನೋವು ಕಾಡಿಯೇ ಇರುತ್ತದೆ.

ಹೀಗೆ ಕಾಣಿಸುವ ನೋವು ಅತಿ ಕ್ಷಿಪ್ರವಾಗಿ ಕಾಣಿಸಿಕೊಳ್ಳಬಹುದು; ಉದಾಹರಣೆಗೆ, ತಲೆನೋವು, ಹೊಟ್ಟೆನೋವು, ಬೆನ್ನುನೋವು, ಎದೆನೋವು, ಇತ್ಯಾದಿ. ಹಲವು ವೇಳೆ ನೋವು ಸಣ್ಣದಾಗಿ ಶುರುವಾಗಿ, ದಿನ ಕಳೆದಂತೆ ತೀವ್ರವಾಗುತ್ತದೆ. ಈ ರೀತಿ ನೋವು ಕಾಣಿಸಿಕೊಂಡಾಗ ಅತೀವ ಕಷ್ಟವಾಗುತ್ತದೆ ಮತ್ತು ಎಂದಿನಂತೆ ನಮ್ಮ ಕೆಲಸ-ಕಾರ್ಯಗಳನ್ನು ಮಾಡಲಾಗುವುದಿಲ್ಲ.

ಆಗ ಸಹಜವಾಗಿಯೇ ಸಮೀಪದ ವೈದ್ಯರ ಬಳಿಗೆ ನಾವು ಧಾವಿಸುತ್ತೇವೆ. ಹತ್ತಿರದಲ್ಲಿ ಎಲ್ಲಿಯೂ ವೈದ್ಯರು ಲಭ್ಯವಿಲ್ಲದಿದ್ದರೆ, ಔಷಧಿ ಅಂಗಡಿಗೆ ಹೋಗಿ ನೋವು ನಿವಾರಕ ಮಾತ್ರೆಗಳನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ನೋವು ನಿವಾರಕ ಮಾತ್ರೆಗಳು ಹಲವು ವೇಳೆ ನಮ್ಮ ನೋವನ್ನು ಶೀಘ್ರದಲ್ಲಿ ನಿಯಂತ್ರಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಹಾಗೆ ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಒಂದೆರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ, ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಕೊಂಡುಕೊಳ್ಳುವುದು( ತುರ್ತು ಸಂದರ್ಭಗಳನ್ನು ಹೊರತುಪಡಿಸಿ), ಅಷ್ಟು ಸೂಕ್ತವಲ್ಲ. ಎರಡನೆಯದಾಗಿ, ನೋವಿನ ಅಸಲಿ ಕಾರಣವನ್ನು ವೈದ್ಯರ ಮೂಲಕ ಪತ್ತೆ ಮಾಡಿ, ಅದಕ್ಕೆ ಚಿಕಿತ್ಸೆ ಪಡೆದರೆ, ನೋವು ಬೇರು ಸಹಿತ ನಿರ್ಮೂಲನೆಯಾಗುತ್ತದೆ.

ಪದೇ ಪದೇ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವ ದುರಭ್ಯಾಸ ಮಾಡಿಕೊಂಡರೆ, ಗ್ಯಾಸ್ಟ್ರಿಕ್‌ ಸಮಸ್ಯೆ, ಮೂತ್ರಪಿಂಡ ವೈಫಲ್ಯ ತಲೆದೋರಬಹುದು. ಹಾಗಾಗಿ ವೈದ್ಯರು ತಪಾಸಣೆ ಮಾಡಿ ಬರೆದ ಚೀಟಿಯಲ್ಲಿರುವಂತೆ ನೋವು ನಿವಾರಕ ಮಾತ್ರೆಗಳನ್ನು ಸಮಯೋಚಿತವಾಗಿ ಬಳಸಿದರೆ ಅವು ನಮಗೆ ವರದಾನವಾಗುವುದರಲ್ಲಿ ಸಂದೇಹವಿಲ್ಲ.

ಡಾ. ಪವನ್ ಕೇಸರಿ.
7259726330


Share this with Friends

Related Post