Fri. Nov 1st, 2024

ಕೇರಳದಲ್ಲಿ ಪ್ರಾಣಿ ಬಲಿ:ತನಿಖೆ‌ಗೆ ಇನ್ನೊಂದು‌ ಎಸ್ಐಟಿ ರಚಿಸಲಿ- ಹೆಚ್ ಡಿ ಕೆ ವ್ಯಂಗ್ಯ

Share this with Friends

ಬೆಂಗಳೂರು,ಜೂ.3: ಕೇರಳದಲ್ಲಿ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ಇನ್ನೊಂದು ವಿಶೇಷ ತನಿಖಾ ತಂಡ ರಚನೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ಕೆ, ಪ್ರತಿಯೊಂದಕ್ಕೂ ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಾರೆ, ಬಲಿ ವಿಷಯಕ್ಕೂ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಇದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ನೀಡಿಕೆ, ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ ಹಾಗಾಗಿ ಅದರ ತನಿಖೆಗೂ ಒಂದು ಎಸ್ಐಟಿ ರಚನೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂದು ಈ ಹಿಂದೆ ಡಿಕೆಶಿ ಹೇಳಿದ್ದ ವಚನವನ್ನು ಉಲ್ಲೇಖಿಸಿದ ಹೆಚ್ ಡಿ ಕೆ, ಮೊದಲು ನಿಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಿ, ಶತ್ರು ಭೈರವಿ ಯಾಗವಂತೆ, ಅವರಿಗೆ ಭಕ್ತಿ ಇದೆಯಂತೆ, ಪವಿತ್ರ ಪುಣ್ಯಕ್ಷೇತ್ರ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಅವರೂ ಹೋಗಿದ್ದಾರೆ, ಅಲ್ಲಿ ಯಾವ ರೀತಿಯ ಪೂಜೆ ನಡೆಯುತ್ತದೆ, ಆ ಕ್ಷೇತ್ರ ಮಹಿಮೆ ಏನು ಎನ್ನುವುದು ತಿಳಿದಿರುತ್ತದೆ, ಹಾಗಿದ್ದರೂ ಅವರು ಸುಳ್ಳು ಹೇಳಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ಅಪಚಾರ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ನಮ್ಮ ಕುಟುಂಬದ ಮೇಲೆ ಏನೆಲ್ಲಾ ಚಿತಾವಣೆ ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ಯಾವತ್ತೂ ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ನಮ್ಮಿಬ್ಬರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇನ್ನೊಬ್ಬರಿಗೆ ಕೇಡು ಬಯಿಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಹೊರಬೇಕು ಎಂದು ಇದೇ ವೇಳೆ ಕುಮಾರಸ್ವಾಮಿ ಆಗ್ರಹಿಸಿದರು.

ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಅಕ್ರಮದಲ್ಲಿ ಸರ್ಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲಾ ನಿಗಮ ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಒತ್ತಾಯಿಸಿದರು.

ನಿಗಮದ ಹಣ ಹಲವಾರು ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಬಗ್ಗೆ ದಾಖಲೆಗಳೇ ಬಹಿರಂಗ ಆಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಯಾಕೆ ಹೋಯಿತು ಯಾರು ವರ್ಗಾವಣೆ ಮಾಡಿಸಿದರು ಇಲ್ಲಿ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅದ ಕೆಲ ಹೊತ್ತಿನಲ್ಲಿ ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ದೊಡ್ಡ ಮೊತ್ತ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ ಎಂದು ಆರೋಪ ಮಾಡಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಹಳ ಮಾತಾನಾಡುತ್ತಾರೆ ಪ್ರತಿಯೊಂದಕ್ಕೂ ಮುಂದೆ ಬಂದು ಹೇಳಿಕೆ ಕೊಡುತ್ತಾರೆ, ಇದಕ್ಕೂ ಅವರು ಉತ್ತರ ಕೊಡಲಿ ಎಂದು ಹೆಚ್ ಡಿ ಕೆ ಸವಾಲು ಹಾಕಿದರು.

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೂಗಿನ ನೇರದಲ್ಲೇ ಈ ಅಕ್ರಮ ಹಣದ ವರ್ಗಾವಣೆ ನಡೆದಿದೆ, 200 ಪರ್ಸೆಂಟ್ ಕಾಂಗ್ರೆಸ್‌ನ ಹೈಕಮಾಂಡ್ ಗಮನಕ್ಕೆ ಬಂದೇ ಇದೆಲ್ಲಾ ನಡೆದಿದೆ. ವಿವಿಧ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ರಾಜ್ಯದಿಂದಲೇ ಹಣ ಪೂರೈಕೆ ಮಾಡಿದೆ ಎನ್ನುವುದಕ್ಕೆ ಇದೇ ಸಾಕ್ಷ್ಯ ಎಂದು ನೇರ ಆರೋಪ ಮಾಡಿದರು.

ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಇರುವುದರಿಂದ ಸಿಬಿಐ ತನಿಖೆ ಆಗಿಯೇ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್ ಐಟಿ ರಚನೆ ಮಾಡಿದೆ. ಎಸ್ ಐಟಿ ಆದರೆ ದಾಖಲೆ ನಾಶ ಮಾಡಬಹುದು, ಕಡತಗಳನ್ನು ಸುಟ್ಟು ಹಾಕಬಹುದು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಅವರ ಮನೆಯಿಂದ ಪೆನ್ ಡ್ರೈವ್ ತೆಗೆದುಕೊಂಡು ಬಂದರಲ್ಲ, ಆ ಪೆನ್ ಡ್ರೈವ್ ಎಲ್ಲಿದೆ ಈಗ ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದರು.


Share this with Friends

Related Post