ಮೈಸೂರು,ಜೂ.5: ಮಾಡದ ತಪ್ಪಿಗೆ ತನ್ನನ್ನ ಹೊಣೆ ಮಾಡಿದ್ದಾರೆಂದು ಆರೋಪಿಸಿ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ಕಲ್ಮಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರೆಹಾನ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಂಜೇಶ್ ಫ್ಯಾಕ್ಟರಿ ಆವರಣದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕ್ಷಮಿಸುವಂತೆ ಅವರು ಮನವಿ ಮಾಡಿದ್ದಾರೆ.
ತಾನು ಮಾಡದ ತಪ್ಪಿಗೆ ನನ್ನನ್ನ ಹೊಣೆ ಮಾಡಿದ್ದಾರೆ ಎಂದು ಗೋವಿಂದ, ರಾಜು ಹಾಗೂ ಪೊಲೀಸರ ವಿರುದ್ದ ಆರೋಪಿಸಿ ನಂಜೇಶ್ ನೇಣು ಹಾಕಿಕೊಂಡಿದ್ದಾರೆ.
ಆದರೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಕೆಲಸ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಕರಣ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ.
ಮಹದೇವನಗರದ ನಿವಾಸಿ ನಂಜೇಶ್ ಬಿಎಡ್ ಮಾಡಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿದ್ದರು, ಕೆಲಸ ಕಳೆದುಕೊಂಡ ಕಾರಣ ರೇಹ್ಯಾನ್ಸ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಾರ್ಖಾನೆಯಲ್ಲಿ ಕಳುವು ಪ್ರಕರಣ ಆಗಿತ್ತು,
ಈ ಆರೋಪವನ್ನ ನಂಜೇಶ್ ಮೇಲೆ ಹೊರೆಸಲಾಗಿತ್ತು ಎಂದು ಹೇಳಲಾಗಿದೆ.
ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ತಮಗಾದ ಕಿರುಕುಳವನ್ನ ಹೇಳಿಕೊಂಡಿದ್ದು,
ಕಳ್ಳರನ್ನ ಹಿಡಿದುಕೊಡಬೇಕು ಇಲ್ಲದಿದ್ದಲ್ಲಿ ನೀವೇ ಹೊಣೆಗಾರರಾಗುತ್ತೀರ ಎಂದು ಒತ್ತಡ ಹೇರಿದ್ದರೆಂದು ನಂಜೇಶ್ ವಿಡಿಯೊನಲ್ಲಿ ತಿಳಿಸಿದ್ದಾರೆ.
ಆದರೆ ನಂಜೇಶ್ ಸಹೋದರ ಸರಿಯಾದ ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನೀಡಿರುವ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ.
ದೂರು ದಾಖಲಿಸಿಕೊಂಡಿರುವ ನಂಜನಗೂಡು ಟೌನ್ ಪೊಲೀಸರು ಸೂಕ್ತ ತೆನಿಖೆ ನಡೆಸಿ ನಂಜೇಶ್ ಆತ್ಮಹತ್ಯೆಗೆ ಸರಿಯಾದ ಕಾರಣ ಕಂಡುಹಿಡಿದು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ.