Fri. Nov 1st, 2024

ದೇವಿಕೆರೆ ರಕ್ಷಿಸಲು ರಸ್ತೆಗೆ ಹಾಕಲಾಗಿದ್ದ ಗೇಟ್ ತೆರುವು

Share this with Friends

ಮೈಸೂರು,ಜೂ.5: ಚಾಮುಂಡಿಬೆಟ್ಟದ ದೇವಿಕೆರೆ ಪ್ರದೇಶ ರಕ್ಷಿಸಲು ರಾಜಮನೆತನದವರು ನಿರ್ಮಿಸಿದ್ದ ಗೇಟ್ ಇನ್ನಿಲ್ಲ.

ಸಾರ್ವಜನಿಕರು ನೀಡಿದ ದೂರನ್ನು ಪರಿಗಣಿಸಿದ ಜಿಲ್ಲಾಡಳಿತ ಪೊಲೀಸ್ ಭದ್ರತೆಯಲ್ಲಿ ಗೇಟ್ ತೆರುವುಗೊಳಿಸಿ ರಸ್ತೆಯನ್ನ ಸಾರ್ವಜನಿಕರ ಓಡಾಟಕ್ಕೆ ಬಿಟ್ಟುಕೊಟ್ಟಿದೆ.

ಮೈಸೂರು ತಾಲೂಕು ಕಸಬಾ ಹೋಬಳಿ ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ದೇವಿಕೆರೆ ರಸ್ತೆಯಿಂದ ನಾಯಕರಬೀದಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ದಾಖಲೆಗಳ ಪ್ರಕಾರ ಸರ್ಕಾರಿ ರಸ್ತೆ.

ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನ ಅಭಿವೃದ್ದಿ ಮಾಡಿದೆ.ಪ್ರತಿವರ್ಷ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತೆಪ್ಪೋತ್ಸವ ಅದ್ದೂರಿಯಾಗಿ ನೆರವೇರುತ್ತದೆ,ಈ ಕೆರೆ ತನ್ನದೇ ಆದ ಮಹತ್ವವನ್ನ ಹೊಂದಿದೆ.

ಈ‌ ಭಾಗವನ್ನು ಕೆಲವು ಮಂದಿ ಅನೈತಿಕ ತಾಣವಾಗಿ ಬಳಸಿಕೊಂಡ ಹಿನ್ನಲೆ ರಾಜಮನೆತನದವರು ಮುಂಜಾಗ್ರತಾ ಕ್ರಮವಾಗಿ ರಸ್ತೆಗೆ ಗೇಟ್ ನಿರ್ಮಿಸಿ ದೇವಿಕೆರೆ ಸಮೀಪದ ತಾಣವನ್ನ ರಕ್ಷಿಸುವ ಯತ್ನ ಮಾಡಿದ್ದಾರೆ.

ಆದರೆ ಈ ಬೆಳವಣಿಗೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ.ಶಾಲೆಗೆ ತೆರಳಲು,ಶಾಲಾ ವಾಹನಗಳು ಬರಲು,ಕಚೇರಿಗಳಿಗೆ ತೆರಳಲು,ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ತೆರಳಲು ಹಾಗೂ ಇನ್ನಿತರ ಕಾರ್ಯಗಳಿಗೆ ಇದೇ ರಸ್ತೆಯನ್ನ ಸ್ಥಳೀಯರು ಬಳಸುತ್ತಾರೆ.

ಸುಮಾರು ಒಂದೂವರೆ ವರ್ಷದ ಹಿಂದೆ ರಾಜಮನೆತನದವರು ರಸ್ತೆಗೆ ಅಡ್ಡವಾಗಿ ಗೇಟ್ ನಿರ್ಮಿಸಿ ಭದ್ರತಾ ಸಿಬ್ಬಂದಿಗಳನ್ನ ನೇಮಿಸಿ ಸಾರ್ವಜನಿಕರು ಓಡಾಡಲು ಸಾಧ್ಯವಾಗದಂತೆ ನಿರ್ಭಂಧ ಹೇರಿದ್ದಾರೆ.

ಈ ಬಗ್ಗೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಎಂ.ಮಹದೇವಸ್ವಾಮಿ ರಸ್ತೆ ತೆರವುಗೊಳಿಸಿ ಸ್ಥಳೀಯ ನಿವಾಸಿಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಲಿಖಿತ ಮನವಿ ನೀಡಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಡಳಿತ ಕೆ.ಆರ್.ಠಾಣೆಯ ಪೊಲೀಸ್ ಸಿಬ್ಬಂದಿಗಳ ಭದ್ರತೆಯೊಂದಿಗೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಗೇಟ್ ತೆರುವುಗೊಳಿಸಿ ರಸ್ತೆಯನ್ನ ಮುಕ್ತಗೊಳಿಸಿದೆ.

ರಸ್ತೆಯನ್ನೇನೊ ಮುಕ್ತಗೊಳಿಸಲಾಗಿದೆ,ಅದು ಸರಿ‌,ಆದರೆ ಪವಿತ್ರ‌ ದೇವೀಕೆರೆ ಮತ್ತು ಸುತ್ತಮುತ್ತಲ ಪ್ರದೇಶ‌ ಅಪವಿತ್ರವಾಗದಂತೆ‌ ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ.


Share this with Friends

Related Post