Fri. Jan 10th, 2025

ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ; ರಾಜೀನಾಮೆಗೆ ಅಶೋಕ್ ಆಗ್ರಹ

Share this with Friends

ಬೆಂಗಳೂರು, ಜೂ.6: ಆರ್ಥಿಕ ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದು ಅವರೂ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ವಿಧಾನಸೌಧದಿಂದ ರಾಜಭವನವರೆಗೆ ತೆರಳಿ, ರಾಜ್ಯಪಾಲರಿಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,
ಸಚಿವ ಬಿ.ನಾಗೇಂದ್ರ ಜೊತೆ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರ ತಕ್ಷಣ ರಾಜೀನಾಮೆಗೆ ಆಗ್ರಹಿಸಿ ನಾವು ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.

ಸಚಿವ ಬಿ.ನಾಗೇಂದ್ರ ಅವರು ಈ ಪ್ರಕರಣದಲ್ಲಿ ಸಣ್ಣ ಆರೋಪಿ,ಇದಕ್ಕೂ ದೊಡ್ಡ ಆರೋಪಿಗಳು ಇದರ ಹಿಂದೆ ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು,ಅಕ್ರಮದ ಹಣವನ್ನು ಸಚಿವರೊಬ್ಬರೇ ನುಂಗಿಲ್ಲ, ಇದರಲ್ಲಿ ಇಡೀ ಸಚಿವ ಸಂಪುಟ ಶಾಮೀಲಾಗಿದೆ,ಹಣ ಹೈದರಾಬಾದ್‌ಗೆ ಹೋಗಿ ನಂತರ ದೆಹಲಿಗೆ ತಲುಪಿದೆ ಎಂದು ಗಂಭೀರ ಆರೋಪ ಮಾಡಿದರು.

ತಮ್ಮ ಬುಡಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ, ರಾಹುಲ್‌ ಗಾಂಧಿ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲ ಕೂಡ ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಬಡವರಿಗೆ ಸೇರಬೇಕಾಗಿದ್ದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಬಿಗೆ ಹೋಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನೂ ನುಂಗುತ್ತಾರೆ ಎನ್ನುವುದು ರಾಜ್ಯ ರಾಜಕೀಯದ ದುರಂತ. 14 ಬಾರಿ ಬಜೆಟ್‌ ಮಂಡಿಸಿದ್ದೇನೆ ಎಂದು ಸಿಎಂ ಹೇಳಿಕೊಳ್ಳುತ್ತಾರೆ. ಈಗ ಅವರ ಕಣ್ಣಿನಡಿಯಲ್ಲೇ ಹಗರಣ ನಡೆದಿದೆ. ಒಂದು ವರ್ಷ ಕಾಂಗ್ರೆಸ್‌ ಸರ್ಕಾರ ಲೂಟಿ ಗ್ಯಾರಂಟಿಯನ್ನು ನೀಡಿದೆ ಎಂದು ಟೀಕಾಪ್ರಹಾರ ನಡೆಸಿದರು.

ಸಿಬಿಐ ಮಾಡಬೇಕಾದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ಎಟಿಎಂ ಸರ್ಕಾರ ಟಕಾಟಕ್‌ ಎಂದು ಹಣ ವರ್ಗಾವಣೆ ಮಾಡಿಕೊಂಡಿದೆ. ಇನ್ನೂ ಯಾವ ನಿಗಮಗಳಲ್ಲಿ ಎಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೊ,ಎಷ್ಟು ಬೇನಾಮಿ ಖಾತೆಗಳಿಗೆ ಹಣ ಹೋಗಿದೆಯೊ ಎಂಬುದು ಪತ್ತೆಯಾಗಬೇಕು ಎಂದು ಅಶೋಕ್ ಒತ್ತಾಯಿಸಿದರು.

ರಾಜ್ಯಪಾಲರಿಗೆ ಈ ಕುರಿತು ವಿವರ ನೀಡಿದ್ದೇವೆ. ಬಿಜೆಪಿ ನಾಲ್ಕು ಹಂತಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದೆ. ಸಚಿವರು ಹಾಗೂ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ.ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.


Share this with Friends

Related Post