Fri. Jan 10th, 2025

ಕೈ ಊನವಾಗಿ 6 ತಿಂಗಳಾದರೂ ಬಾರದ ಪರಿಹಾರ:ಸಂಕಷ್ಟದಲ್ಲಿ ಕಾರ್ಮಿಕ

Share this with Friends

ನಂಜನಗೂಡು,ಜೂ.7: ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಿಷನ್ ಗೆ ಕೈ ಕೊಟ್ಟು ಗಾಯಗೊಂಡ ಕಾರ್ಮಿಕನಿಗೆ 6 ತಿಂಗಳಾದರೂ ಪರಿಹಾರ ಬಾರದೆ ಇರುವುದು ನಿಜಕ್ಕೂ ವಿಪರ್ಯಾಸ.

ಕೆಲಸವೂ ಇಲ್ಲದೆ ಪರಿಹಾರವೂ ಇಲ್ಲದೆ ಜೀವನ ನಿರ್ವಹಣೆ ಮಾಡಲಾಗದೆ ಕಾರ್ಮಿಕನ ಕುಟುಂಬ ತೊಂದರೆ ಪಡುತ್ತಿದೆ,ಆದರೆ ಕೇಳುವವರು ಯಾರೂ ಇಲ್ಲದಂತಾಗಿದೆ.

ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಕಾರ್ಖಾನೆ ಮುಖ್ಯಸ್ಥರು ಕೈ ಕೊಟ್ಟಿದ್ದಾರೆ,ಹಾಗಾಗಿ ಅವರ ಮೇಲೆ ಎಫ್.ಐ.ಆರ್.ದಾಖಲಾಗಿದೆ,ಆದರೂ ಪರಿಹಾರ ನೀಡದೆ ನಿರ್ಲಕ್ಷಿಸಿದ್ದಾರೆ.

ನಂಜನಗೂಡು ತಾಲೂಕು ಹೊಸಕೋಟೆ ಗ್ರಾಮದ ಅಂದಾನಿ ಅವರು ಕೈ ಊನಗೊಂಡಿದ್ದು,ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಅಂದಾನಿ ಅವರು ಕಳೆದ 11 ವರ್ಷಗಳಿಂದ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಶೀಲ್ ಪ್ರೈ.ಲಿ.ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಂದಾನಿ ಅವರಿಗೆ ಯಾವುದೇ ತರಬೇತಿ ನೀಡದೆ ಸುರಕ್ಷಾ ಸಲಕರಣೆಗಳನ್ನೂ ಒದಗಿಸದೆ ಬಲವಂತವಾಗಿ ಮಿಷನ್ ಆಪರೇಟರ್ ಕೆಲಸಕ್ಕೆ ನಿಯೋಜಿಸಲಾಗಿತ್ತು.

ಕಳೆದ ಡಿಸೆಂಬರ್ 27 ರಂದು ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಿಷಿನ್ ಗೆ ಕೈ ಸಿಲುಕಿ ಅಂದಾನಿ ಅವರ ಎಡಗೈ ಮೂಳೆ ಮುರಿದಿದೆ.

ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಕಾರ್ಖಾನೆ ಮುಖ್ಯಸ್ಥರು ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದ್ದರು.ಆದರೆ ಘಟನೆ ನಡೆದು 6 ತಿಂಗಳಾದರೂ ಈವರೆಗೆ ಪರಿಹಾರ ಕೊಟ್ಟಿಲ್ಲ,ಜೊತೆಗೆ ಉದ್ಯೋಗವನ್ನೂ ನೀಡಿಲ್ಲ ಎಂದು ಅಂದಾನಿ ತೀವ್ರ ಬೇಸರ ಪಟ್ಟಿದ್ದಾರೆ.

ವಿಧಿ ಇಲ್ಲದೆ ಕಾನೂನು ಮೊರೆ ಹೋಗಿರುವ ಅಂದಾನಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ಪ್ರಮುಖರಾದ ಜೇಮ್ಸ್ ಮುಲಾಯಲ್,ಟಾಮಿ,ಮನು ಹಾಗೂ ಶ್ರೀನಿವಾಸ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿರುವ ಅಂದಾನಿ ಕುಟುಂಬಕ್ಕೆ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕಿದೆ.


Share this with Friends

Related Post