Fri. Nov 1st, 2024

ಬರದಿಂದ ನಲುಗುತ್ತಿರುವ ರಾಜ್ಯಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಬರೆ

Share this with Friends

ನವದೆಹಲಿ,ಫೆ.13: ಮಳೆ ಕೊರತೆ ಹಾಗೂ ಬರದಿಂದ ನಲುಗುತ್ತಿರುವ ರಾಜ್ಯಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಗಾಯದ ಮೇಲೆ ಬರೆ ಎಳೆದಿದೆ.

ತಮಿಳುನಾಡಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದೆ.ಇದರಿಂದ ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ‌ ಎದುರಾಗಿದೆ.

ದೆಹಲಿಯಲ್ಲಿ ಸೋಮವಾರ ಸಮಿತಿಯ ಸಭೆ ನಡೆಯಿತು. 7.61 ಟಿಎಂಸಿ ಬಾಕಿ ಜೊತೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಸಭೆಯಲ್ಲಿ ಒತ್ತಾಯಿಸಿತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, 2023ರ ಜೂನ್ 1 ರಿಂದ 2024ರ ಫೆಬ್ರವರಿ 9ರವರೆಗೆ ಕರ್ನಾಟಕ ಕಾವೇರಿ ಕೊಳ್ಳದ 4 ಜಲಾಶಗಳಲ್ಲಿ 52.43ರಷ್ಟು ಒಳಹರಿವಿನ ಕೊರತೆಯಿದೆ.

ಜೊತೆಗೆ ರಾಜ್ಯದಲ್ಲಿ ತೀವ್ರ ಬರವಿದೆ ಹೀಗಾಗಿ ನೀರು ಬಿಡುಗಡೆ ಸಾಧ್ಯವಿಲ್ಲ, ಸಂಕಷ್ಟ ಸೂತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ಸಮಿತಿ, ನ್ಯಾಯಾಧೀಕರಣದ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ತಮಿಳುನಾಡಿಗೆ ತಲಾ 2.5 ಟಿಎಂಸಿ ನೀರು ಹರಿಸಲು ಶಿಫಾರಸ್ಸು ಮಾಡಿದೆ.

ಸಮಿತಿಯ ಈ ಶಿಫಾರಸ್ಸನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.


Share this with Friends

Related Post