ಮೈಸೂರು, ಜೂ.14: ವಿಶ್ವ ಯೋಗ ದಿನಾಚರಣೆಯನ್ನು ಜೂನ್ 21 ರಂದು ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಪ್ರತಿ ವರ್ಷ ಯೋಗ ದಿನಾಚರಣೆ ಯಲ್ಲಿ ಭಾಗವಹಿಸುತ್ತೇನೆ, ಸರ್ಕಾರದಿಂದ ನೀಡಿರುವ 1 ಲಕ್ಷ ಅನುದಾನದ ಜೊತೆಗೆ ವಿವಿಧ ದಾನಿಗಳಿಂದಲೂ ಅನುದಾನ ಪಡೆದು ಆ ಅನುದಾನವನ್ನು ಬಳಕೆ ಮಾಡಿ ಉತ್ತಮವಾಗಿ ಯೋಗ ದಿನಾಚರಣೆ ಆಯೋಜನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಮಾತನಾಡಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮೈಸೂರಿನ ಯೋಗವು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟದ ಯೋಗ ದಿನಾಚರಣೆ ಆಯೋಜನೆಗೆ 1 ಲಕ್ಷ ರೂ ಅನುದಾನ ಬರುತ್ತದೆ. ಯೋಗವನ್ನು ಅರಮನೆಯ ಮುಂಭಾಗದಲ್ಲಿ ಆಯೋಜನೆ ಮಾಡಲಾಗುವುದು. ಅಂದು ಬೆಳಿಗ್ಗೆ 7 ಗಂಟೆಗೆ ಯೋಗ ಪ್ರಾರಂಭವಾಗುವುದು. ಕನಿಷ್ಠ 10 ಸಾವಿರ ಯೋಗಪಟುಗಳು ಭಾಗವಹಿಸುವರು ಎಂದು ತಿಳಿಸಿದರು.
ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡಿ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗುವುದು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮ ಬೆಳಗ್ಗೆ 6.30 ಕ್ಕೆ ಪ್ರಾರಂಭವಾಗುವುದು. ಅಚ್ಚುಕಟ್ಟಾಗಿ ಯೋಗ ದಿನಾಚರಣೆ ಆಯೋಜನೆಗೆ ವಿವಿಧ ಇಲಾಖೆಗಳಿಗೆ ನಿಯೋಜಿಸುವ ಕಾರ್ಯಗಳನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.