ಮೈಸೂರು, ಜೂ.14: ಕಾವೇರಿ ಕ್ರಿಯಾಸಮಿತಿ ಹೋರಾಟಗಾರರು ಮೇಕೆದಾಟು ಬಳಿ ಶನಿವಾರ(ಜೂ.15) ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು, ಮೇಕೆದಾಟು ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಈ ಧರಣಿ ಹಮ್ಮಿಕೊಂಡಿರುವುದಾಗಿ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಬೆಳಗ್ಗೆ 8.30 ಕ್ಕೆ ಮೈಸೂರಿನ ಅರಮನೆ ಮುಂಭಾಗದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಿಂದ ಎಲ್ಲಾ ಕಾವೇರಿ ಕ್ರಿಯಾಸಮಿತಿ ಹೋರಾಟಗಾರರು ವಾಹನಗಳಲ್ಲಿ ತೆರಳಿ ಮೇಕೆದಾಟಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ಬೇಕಾದ ಅನುಮತಿಯನ್ನು ಪಡೆಯಲು ಮತ್ತು ಯೋಜನೆ ಪ್ರಾರಂಭಿಸಲು ಕಾರ್ಯ ಪ್ರವೃತರಾಗಬೇಕು ಹಾಗೂ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ಧರಣಿ ಸತ್ಯಾಗ್ರಹದಲ್ಲಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ತೇಜೇಶ್ ಲೋಕೇಶ್ ಗೌಡ ಮಾತನಾಡಿ ನಮ್ಮ ರಾಜ್ಯದಿಂದ ಬಿಜೆಪಿಗೆ 17 ಸಂಸದರನ್ನು ಹಾಗೂ ದಳದಿಂದ ಇಬ್ಬರನ್ನು ಆರಿಸಿ ಸಂಸತ್ತಿಗೆ ಕಳುಹಿಸಿದ್ದೇವೆ. ತಮಿಳುನಾಡಿನಿಂದ ಪ್ರಧಾನಮಂತ್ರಿಗಳಿಗೆ ಯಾವುದೇ ಸೀಟು ಲಭಿಸಿರುವುದಿಲ್ಲ, ಪ್ರಧಾನ ಮಂತ್ರಿಗಳು ಮಲತಾಯಿ ಧೋರಣೆ ತೋರದೆ ಕನ್ನಡಿಗರಿಗೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತ ಪರಿಹಾರ ಒದಗಿಸಬೇಕು ಹಾಗೂ ಈಗ ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರದ ಮಂತ್ರಿಗಳಾಗಿರುವವರು ನಮ್ಮ ರಾಜ್ಯದ ನೆಲ,ಜಲ,ಭಾಷೆ ಪರವಾಗಿ ಬದ್ದತೆಯಿಂದ ನಿಲ್ಲಬೇಕು ನಮಗೆ ಕಾವೇರಿ ವಿಚಾರದಲ್ಲಿ ಮತ್ತು ಮೇಕೆದಾಟು ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಎಂಜೆ ಸುರೇಶ್ ಗೌಡ,
ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ,ಕೃಷ್ಣಪ್ಪ, ನಾಗರಾಜು ಹಾಗೂ ಭಾಗ್ಯಮ್ಮ ಉಪಸ್ಥಿತರಿದ್ದರು.