Sat. Nov 2nd, 2024

ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು :ಸಿಎಂ ಜತೆ ಚರ್ಚಿಸಿ ತೀರ್ಮಾನ-ಪರಮೇಶ್ವರ್

Share this with Friends

ಬೆಂಗಳೂರು,ಜೂ.18: ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಲು ನಿನ್ನೆ ತೆರಳಬೇಕಿತ್ತು. ಆದರೆ, ಬಕ್ರೀದ್ ಹಬ್ಬ ಇದ್ದರಿಂದ ಹೋಗಲು ಸಾಧ್ಯವಾಗಿಲ್ಲ. ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟು ಧೈರ್ಯ ಹೇಳಿ ಬರುತ್ತೇನೆ ಎಂದು ತಿಳಿಸಿದರು.

ರೇಣುಕಾಸ್ವಾಮಿ ಕುಟುಂಬದ ಸದಸ್ಯರಿಗೆ ತನಿಖೆ ನಡೆದ ಬಳಿಕ ಆರ್ಥಿಕ ನೆರವು ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರದಿಂದ ನೆರವು ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣಗೆ ನೋಟಿಸ್‌ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸಿನಿಮಾ ನಟರಾಗಿರುವುದರಿಂದ ಕಲಾವಿದರು ಸಂಪರ್ಕದಲ್ಲಿರುವುದು ಸಹಜ, ಸಾಕ್ಷ್ಯಾಧಾರಗಳ ಮೇಲೆ ತನಿಖೆ ಮುಂದುವರೆಯುತ್ತದೆ,ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ತನಿಖೆ ಮಾಡಲಾಗುವುದು ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಭಟನೆ ಮಾಡೋದು ಅವರ ಹಕ್ಕು. ಬಿಜೆಪಿಯವರು ಪ್ರತಿಯೊಂದರಲ್ಲೂ ರಾಜಕಾರಣ ಮಾಡುತ್ತಾರೆ, ಅವರ ಅವಧಿಯಲ್ಲಿ 14 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದರು, ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಜಾಸ್ತಿ ಮಾಡಿದ್ದರು,ಅದನ್ನು ಬಿಜೆಪಿಯವರು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರಲ್ಲದೆ ಅವರು ಪ್ರತಿಭಟನೆ ಮಾಡಲಿ ನಾವು ಎದುರಿಸುತ್ತೇವೆ ಎಂದು ತಿಳಿಸಿದರು.


Share this with Friends

Related Post