ಮೈಸೂರು, ಜೂ.18: ದಕ್ಷಿಣ ಭಾರತದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ ಹೇಳಿದ್ದಾರೆ.
ಇದನ್ನು ಮೊದಲು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ರವಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಎಂದು ಹೋರಾಟ ನಡೆಸಿದ ಬಿಜೆಪಿಯವರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೇ ಪೆಟ್ರೋಲ್ ಡೀಸೆಲ್ ಬೆಲೆ ಕರ್ನಾಟಕಕ್ಕಿಂತಲೂ ಹೆಚ್ಚಿಗೆ ಇದೆ ಎಂಬ ಜ್ಞಾನ ಹೊಂದಿಲ್ಲ ಎಂಬುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.
ಈ ಹಿಂದೆ ಕೇಂದ್ರ ಬಿಜೆಪಿ ಸರಕಾರವು ಒಂದು ಹಂತದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.21 ರೂ.ದಿಂದ 32.98 ರೂ.ಗೆ ಹಾಗೂ ಡೀಸೆಲ್ ಮೇಲೆ 3.45 ರೂ.ದಿಂದ 31.84 ರೂ.ಗೆ ಹೆಚ್ಚಳ ಮಾಡಿತ್ತು.
ಇದು ನಿಜವಾಗಿಯೂ ಜನರ ಮೇಲೆ ಹೊರೆ, ಆಗಾಗ್ಗೆ ಕೇಂದ್ರ ಸರಕಾರವು ತೆರಿಗೆ ಕಡಿತಗೊಳಿಸಿದರೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ 19.9 ರೂ. ಹಾಗೂ ಡೀಸೆಲ್ ಮೇಲೆ 15.8 ರೂ. ಇದೆ. ಮೋದಿ ಅವರ ಸರಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆ ಇಳಿಕೆ ಮಾಡಬೇಕು ಎಂದು ಮಂಚೇಗೌಡನ ಕೊಪ್ಪಲು ರವಿ ಒತ್ತಾಯಿಸಿದ್ದಾರೆ.