ಮೈಸೂರು,ಜೂ.19: ಮನೆ ಬಾಡಿಗೆಗೆ ಕೊಟ್ಟರೆ ಎನೇನೊ ಮೋಸ ಆಗಬಹುದು ಅಂತ ಯೋಚಿಸೋ ಈ ಕಾಲದಲ್ಲಿ ಮಾಲಿಕನೇ ಮನೆ ದೋಚಿರುವ ಹೇಯ ಘಟನೆ ಮೈಸೂರಿನಲ್ಲಿ ನಡೆದಿದೆ.
ನಕಲಿ ಕೀ ಬಳಸಿ ಬಾಡಿಗೆ ಮನೆಯನ್ನ ಮಾಲೀಕನೇ ದೋಚಿದ ಘಟನೆ ಮೈಸೂರಿನ
ಲೋಕನಾಯಕನಗರದಲ್ಲಿ ನಡೆದಿದೆ.
ಫುಡ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ ಆಗಿರುವ ಮೇಘರಾಜ್ ರವರ ಕುಟುಂಬ ಎಲ್ಲಾ ಕಳೆದುಕೊಂಡು ಅತಂತ್ರವಾಗಿದೆ.
ಮನೆ ಮಾಲೀಕ ಮಂಜುನಾಥ್ ಹಾಗೂ ಆತನ ಸಹೋದರನ ಮೇಲೆ ಮೇಘರಾಜ್ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ್ ಮನೆಗೆ ಮೇಘರಾಜ್ ಸುಮಾರು 6 ತಿಂಗಳ ಹಿಂದೆ ಬಾಡಿಗೆ ಪಡೆದು ವಾಸಕ್ಕೆ ಬಂದಿದ್ದಾರೆ.
ಬಾಡಿಗೆ ವಿಚಾರದಲ್ಲಿ ಮೇಘರಾಜ್ ಹಾಗೂ ಮಂಜುನಾಥ್ ನಡುವೆ ವಿವಾದ ಶುರುವಾಗಿದೆ.ತಾವು ನೀಡಿದ್ದ ಮುಂಗಡ ಹಣ ವಾಪಸ್ ಪಡೆದು ಮನೆ ಖಾಲಿ ಮಾಡಲು ಮೇಘರಾಜ್ ನಿರ್ಧರಿಸಿದ್ದರು.
ಇದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬೀಗ ಜಡಿದಿದ್ದಾರೆ.ಈ ಬಗ್ಗೆ ಮೇಘರಾಜ್ ಮೇಟಗಳ್ಳಿ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ,
ಮಂಜುನಾಥ್ ಅವರನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿ ಬೀಗ ತೆಗೆಸಿದ್ದರು.
ಆದರೂ ಬೇಕೆಂದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡಿ ಮಂಜು ನಾಥ್ ಕ್ಯಾತೆ ತೆಗೆದಿದ್ದಾರೆ. ಕೆಲವು ದಿನಗಳ ಹಿಂದೆ ಮೇಘರಾಜ್ ಕುಟುಂಬ ಸಮೇತ ಸ್ವಂತ ಊರು ಕಬ್ಬಳಿಗೆರೆಗೆ ಹೋಗಿದ್ದರು.
ಅವರು ವಾಪಸು ಬರುವಷ್ಟರಲ್ಲಿ ಮಂಜುನಾಥ್ ಮತ್ತೆ ಮನೆಗೆ ಬೀಗ ಹಾಕಿದ್ದಾರೆ.ಕಿಟಕಿ ಮೂಲಕ ಮನೆ ಒಳಗೆ ನೋಡಿದಾಗ ಮನೆ ಚಲ್ಲಾಪಿಲ್ಲಿ ಯಾಗಿರುವುದು ಕಂಡುಬಂದಿದೆ.
ನಂತರ ಮನೆಯೊಳಗೆ ಹೋಗಿ ಪರಿಶೀಲಿಸಿದಾಗ ಪೀಠೋಪಕರಣಗಳು,
ಸುಮಾರು 85 ಗ್ರಾಂ ಚಿನ್ನಾಭರಣ,1.20 ಲಕ್ಷ ನಗದು,ಫ್ರಿಡ್ಜ್,ವಾಶಿಂಗ್ ಮೆಷಿನ್,ಹರ್ಬಲ್ ಪ್ರಾಡಕ್ಟ್ಸ್ ಗಳು ಕಾಣೆಯಾಗಿರುವುದು ಕಂಡು ಗಾಬರಿಗೊಂಡಿದ್ದಾರೆ.
ನಕಲಿ ಕೀ ಬಳಸಿ ಮಾಲೀಕ ಮಂಜುನಾಥ್ ಹಣ,ಆಭರಣ, ಪದಾರ್ಥಗಳನ್ನ ದೋಚಿದ್ದಾರೆ ಎಂದು ಮೇಘರಾಜ್ ಮೇಟಗಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.