ಬೆಂಗಳೂರು,ಜೂ.19: ಸಮಗ್ರ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ವ್ಯಕ್ತಿತ್ವ ನಿರ್ಮಾಣ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಅತ್ಯಗತ್ಯ ಎಂದು ರಾಮಕೃಷ್ಣ ಮಿಷನ್‌ನ ರಾಜ್‌ಕೋಟ್ ಕೇಂದ್ರದ ಮುಖ್ಯಸ್ಥ ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್ ತಿಳಿಸಿದರು.
ಸಮಕಾಲೀನ ಸಮಾಜದ ಸವಾಲುಗಳನ್ನು ಎದುರಿಸಲು ಮತ್ತು ಶ್ರೇಷ್ಠ ವ್ಯಕ್ತಿತ್ವ ಬೆಳೆಸಲು ಬೌದ್ಧಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನೊಳಗೊಂಡ ಸಮಗ್ರ ಶಿಕ್ಷಣ ವಿಧಾನದ ತುರ್ತು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು
ಆರ್‌ವಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೌಲ್ಯ ಶಿಕ್ಷಣ- ಯಾಕೆ ಮತ್ತು ಹೇಗೆ? ವಿಷಯದ ಕುರಿತು ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್ ಉಪನ್ಯಾಸ ನೀಡಿದರು.
ಮಾನಸಿಕ ಕಾಯಿಲೆಗಳ ಹೆಚ್ಚಳ, ವಿದ್ಯಾರ್ಥಿಗಳ ಆತ್ಮಹತ್ಯೆ, ಮಾದಕ ವ್ಯಸನದಂತಹ ಸಾಮಾಜಿಕ ಸವಾಲುಗಳ ಕುರಿತು ಮಾತನಾಡಿದ ಅವರು ಈ ಸವಾಲುಗಳನ್ನು ಎದುರಿಸಲು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು.
ಬುದ್ಧಿವಂತಿಕೆಯ ಅಂಶ (ಐಕ್ಯೂ) ಮಾತ್ರವಲ್ಲದೆ ಭಾವನಾತ್ಮಕ ಅಂಶ (ಈಕ್ಯೂ) ಮತ್ತು ಅಧ್ಯಾತ್ಮಿಕ ಅಂಶ (ಎಸ್ ಕ್ಯೂ) ಗಳ ಪ್ರಾಮುಖ್ಯತೆಯನ್ನು ತಿಳಿ ಹೇಳಿದರು.
ಭಾರತದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೊಂದೇ ರಾಮಬಾಣ. ನಮಗೆ ವ್ಯಕ್ತಿತ್ವವನ್ನು ಬೆಳೆಸುವ, ಮೌಲ್ಯಗಳನ್ನು ತುಂಬುವ, ಪ್ರತಿಯೊಬ್ಬ ವಿದ್ಯಾರ್ಥಿಯೊಳಗೆ ದೈವಿಕತೆಯ ಕಿಡಿಯನ್ನು ಹಚ್ಚುವ ಶಿಕ್ಷಣದ ಅಗತ್ಯವಿದೆ. ವ್ಯಕ್ತಿತ್ವ ಇಲ್ಲದೆ, ಆಂತರಿಕ ನೈತಿಕತೆ ಇಲ್ಲದೆ ಹೊಂದುವ ಎಲ್ಲಾ ಜ್ಞಾನ, ಸಂಪತ್ತು ಸೇರಿದಂತೆ ಪ್ರಪಂಚದ ಎಲ್ಲಾ ಭೌತಿಕ ಪ್ರಗತಿಯು ಅರ್ಥಹೀನವಾಗಿರುತ್ತದೆ. ಉತ್ತಮ ವ್ಯಕ್ತಿತ್ವದಿಂದ ಉತ್ತಮ ರಾಷ್ಟ್ರವನ್ನು, ಉತ್ತಮ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್ ಜೊತೆ ಸಂವಾದ ನಡೆಯಿತು.
ಆರ್.ವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎನ್. ಸುಬ್ರಹ್ಮಣ್ಯ, ಆರ್‌ವಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.(ಡಾ.) ವೈ.ಎಸ್.ಆರ್. ಮೂರ್ತಿ ಮತ್ತು ಅತಿಥಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.