ಚೆನ್ನೈ,ಜೂ.20: ಕೆಲ ವರ್ಷಗಳ ನಂತರ ಕಳ್ಳಭಟ್ಟಿ ಸದ್ದು ಮಾಡಿದ್ದು ತಮಿಳುನಾಡಿನಲ್ಲಿ ಘೋರ ಘಟನೆ ನಡೆದಿದೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ಯಾಕೆಟ್ ಸಾರಾಯಿ ಸೇವಿಸಿ ಒಟ್ಟು 37 ಮಂದಿ ಮೃತಪಟ್ಟಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಧ್ಯಕ್ಕೆ 70 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವರನ್ನು ಪುದುಚೆರಿಯ ಜಿಪ್ಮರ್, ಸೇಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಕಳ್ಳಬಟ್ಟಿ ಸಾರಾಯಿಯಲ್ಲಿ ವಿಷಕಾರಿ ಮೆಥನಾಲ್ ಇರುವುದು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಪ್ಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸರ್ಕಾರವು ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ.
ಮೃತಪಟ್ಟವರ ಕುಟುಂಬಸ್ಥರು ರಾಜ್ಯ ಸರ್ಕಾರ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಆಗಿರುವ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.
ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ಅವರು ಆಡಳಿತಾರೂಢ ಡಿಎಂಕೆ ಪಕ್ಷವನ್ನು ತರಾಟಗೆ ತೆಗೆದುಕೊಂಡಿದ್ದು,ಕಳ್ಳಭಟ್ಟಿ ದಂಧೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.