ಮೈಸೂರು,ಜೂ.20: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕುಂದುಕೊರತೆಗಳಿಗೆ ಪರಿಹಾರ ಒದಗಿಸಿ, ಪ್ರಯಾಣಿಕರ ಅನುಭವವನ್ನು ಉತ್ತಮ ಪಡಿಸಲು,ಕೆಲ ರೈಲುಗಳಲ್ಲಿನ ಜನದಟ್ಟಣೆ ತಡೆಯಲು ಕ್ರಮ ಕೈಗೊಂಡಿದೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ನೇತೃತ್ವದಲ್ಲಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಪ್ರಯಾಣದ ಅನುಭವವನ್ನುಹೆಚ್ಚಿಸಲು ರೈಲ್ ಮದದ್ ವಾರ್ ರೂಮ್ ಸ್ಥಾಪನೆ ಮಾಡಿದೆ.
ನಿಯಮಿತ ತಪಾಸಣಾ ವ್ಯವಸ್ಥೆ ಮತ್ತಿತರ ಕ್ರಮಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ಹೊಸದಾಗಿ ಪರಿಚಯಿಸಿದೆ.
ಈ ಉಪಕ್ರಮಗಳು ನೈಜ ಸಮಯದಲ್ಲಿ ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಕಾಯ್ದಿರಿಸಿದ ಕೋಚ್‌ಗಳಲ್ಲಿ ಪ್ರಯಾಣಿಸಲು, ಮಾನ್ಯತೆ ಇಲ್ಲದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಂದ ಕಾಯ್ದಿರಿಸಿದ ಕೋಚ್‌ಗಳ ಮಿತಿಮೀರಿದ ದಟ್ಟಣೆಯನ್ನು ತಡೆಯಲು ಉಪಯುಕ್ತವಾಗಿವೆ.
ವಿಭಾಗವು 2024 ರ ಏಪ್ರಿಲ್ ನಿಂದ ಜೂನ್ ವರೆಗೆ ಕಳೆದುಹೋದ ವಸ್ತುಗಳು, ಅಸಮರ್ಪಕ ವಿದ್ಯುತ್ ಉಪಕರಣಗಳು, ಕಾಯ್ದಿರಿಸಿದ ಕೋಚ್‌ಗಳಲ್ಲಿ ಅನಧಿಕೃತ ಪ್ರಯಾಣಿಕರು, ಕೋಚ್‌ಗಳು ಮತ್ತು ಶೌಚಾಲಯಗಳಲ್ಲಿನ ಆಶುಚಿತ್ವ ಮತ್ತು ಪ್ರಯಾಣಿಕರ ಸೌಕರ್ಯಗಳಲ್ಲಿನ ಕೊರತೆಗಳು, ಲಗೇಜ್ ಬುಕಿಂಗ್ ಮತ್ತು ಅಹಾರ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಂತಹ ಸಮಸ್ಯೆಗಳಿಗೆ ಸಂಬಂಧಿಸಿದ 5,132 ದೂರುಗಳನ್ನು ಸ್ವೀಕರಿಸಿದೆ.
ಮೈಸೂರು ವಿಭಾಗವು ಈ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಂಡಿದೆ.
ಮೈಸೂರು ವಿಭಾಗದ ಕೆಲವು ರೈಲುಗಳು ಜನದಟ್ಟಣೆ ಹೊಂದಿದೆ, ಈ ರೈಲುಗಳಲ್ಲಿ ಈಗ ಮಾನ್ಯ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಮಾತ್ರ ಕಾಯ್ದಿರಿಸಿದ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ಖಂಡಿತಪಡಿಸಿಕೊಳ್ಳಲು ಟಿಕೆಟ್ ಪರೀಕ್ಷಕರಿಗೆ (ಟಿಟಿಇ) ಸಹಾಯ ಮಾಡಲು ರೈಲ್ವೆ ಸಂರಕ್ಷಣಾ ದಳದ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಈ ತಿಂಗಳ ಕೆಲ ದಿನಗಳ ಅವಧಿಯಲ್ಲಿಯೇ ಮಾನ್ಯತೆ ಇಲ್ಲದ ಟಿಕೆಟ್‌ಗಳೊಂದಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಿದ ಸುಮಾರು 624 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ ಮತ್ತು ತಪ್ಪಿತಸ್ತರಿಂದ 3,48,770 ರೂ ದಂಡ ಸಂಗ್ರಹಿಸಲಾಗಿದೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ರವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರಿಗೆ ಸುರಕ್ಷಿತ, ದಕ್ಷ ಮತ್ತು ಆರಾಮದಾಯಕ ಪ್ರಯಾಣದ ಅನುಭವಗಳನ್ನು ನೀಡಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಅನಧಿಕೃತ ಪ್ರಯಾಣಿಕರ ಸವಾಲುಗಳು ಕ್ರಿಯಾತ್ಮಕವಾಗಿ ಇರುವ ಕಾರಣ, ನಿರಂತರ ಮೇಲ್ವಿಚಾರಣೆ ಮತ್ತು ಕ್ರಮಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು.