Mon. Dec 23rd, 2024

ಕೆಎಸ್ ಆರ್ ಟಿಸಿ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ‌ ವಿತರಣೆ

Share this with Friends

ಬೆಂಗಳೂರು,ಫೆ.14: ಕೆಎಸ್ ಆರ್ ಟಿಸಿ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ಒಂದು ಕೋಟಿ ರೂ ವಿತರಿಸಲಾಯಿತು.

ಇದೇ ವೇಳೆ ಇತರೆ ಕಾರಣಗಳಿಂದ‌ ಮೃತಪಟ್ಟ 16 ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ 10 ಲಕ್ಷ ರೂ ನೀಡಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಭಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ರೂ.1 ಕೋಟಿ ರೂ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆ ಜಾರಿಗೆ ಬಂದ ನಂತರ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿದ್ದು,
ಇದುವರೆಗೆ 12 ನೌಕರರ ಕುಟುಂಬದವರಿಗೆ ತಲಾ 1 ಕೋಟಿ‌ ರೂ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ.

ಇಂದು ರಾಜೇಶ್ ಡಿ.ಸಿ, ಚಾಲಕ-ಕಂ-ನಿರ್ವಾಹಕ, ಅರಕಲಗೂಡು ಘಟಕ, ಹಾಸನ ವಿಭಾಗ, ಇವರ ಅವಲಂಭಿತರಿಗೆ 1 ಕೋಟಿ ರೂ ಅಪಘಾತ ಪರಿಹಾರ ವಿಮೆ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ 14,19,980‌ ರೂ ಪರಿಹಾರವನ್ನು ನೀಡಲಾಯಿತು.

ನಿಗಮದ ಕುಟುಂಬ ಕಲ್ಯಾಣ ಪರಿಹಾರ ಯೋಜನೆ ಅಡಿಯಲ್ಲಿ ಕಳೆದ ನವೆಂಬರ್ 2023 ಮತ್ತು ಡಿಸೆಂಬರ್ 2023 ರ ಮಾಹೆಗಳಲ್ಲಿ ಮರಣ ಹೊಂದಿದ 16 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ ಪರಿಹಾರದ ಚೆಕ್ ವಿತರಿಸಲಾಯಿತು.

ಸಿಬ್ಬಂದಿಗಳ ಅವಲಂಬಿತರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ಮಾಡಿ,ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ, ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಸುಸೂತ್ರ ಜೀವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿ ಶುಭ ಹಾರೈಸಿದರು.

ನಿಗಮವು ಕಳೆದ ಎರಡು ತಿಂಗಳ‌ ಹಿಂದಷ್ಟೇ ಪರಿಹಾರ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಗಳಿಗೆ ಏರಿಕೆ ಮಾಡಿದ್ದು, ಇದರಿಂದ‌ 16 ಕುಟುಂಬಗಳಿಗೆ ಆರ್ಥಿಕವಾಗಿ ಸ್ವಲ್ಪ ಹೆಚ್ಚು ಹಣ ದೊರೆಯುವಂತಾಗಿದೆ ಇದು ಸದುಪಯೋಗವಾಗಲಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅವರು ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಗಳ ಅವಲಂಬಿತರಿಗೆ ಚೆಕ್ ವಿತರಿಸಿದರು.

ಈ ವೇಳೆ ಮಾತನಾಡಿದ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅತೀ ಶ್ರಮ ಜೀವಿಗಳಾಗಿದ್ದು, ನಿಗಮವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದು ಒಳ್ಳೆಯದು ಎಂದರು.
ಈ ಯೋಜನೆಗಳ ಅನುಷಾನ‌ ಮಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಡಾ.ನಂದಿನಿದೇವಿ.ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತ), ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.


Share this with Friends

Related Post