ಬೆಳಗಾವಿ, ಜೂ.26 : ರಾಜ್ಯದ ಏಳು ಜಿಲ್ಲೆಗಳಲ್ಲಿ ನೂತನ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗ ಮಟ್ಟದ ಸಭೆಯಲ್ಲಿ ಸಚಿವರು ಮಾತನಾಡಿದರು.
ವಿಜಯ ನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಇಲಾಖೆಯಲ್ಲಿ ತರಬೇತಿ ಹಾಗೂ ಗುಣ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಯೋಗಾಲಯಗಳನ್ನು ಎನ್.ಎ.ಬಿ.ಎಲ್ ಮಾನ್ಯತೆಗೆ ಒಳಪಡಿಸಲಾಗುವುದು.
ಬೈಲಹೊಂಗಲ ಪರತಂತ್ರ ಜೀವಿ ಪ್ರಯೋಗಾಲಯ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಸಾಲಿನಲ್ಲಿ ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜವನ್ನು ಆಯಾ ಜಿಲ್ಲೆಗಳ ಬೀಜೋತ್ಪಾದನಾ ಕೇಂದ್ರ ಮತ್ತು ಪ್ರಗತಿಪರ ರೈತರ ಹೊಲದಲ್ಲೇ ಉತ್ಪಾದಿಸುವಂತೆ ಎನ್ .ಚಲುವರಾಯ ಸ್ವಾಮಿ ಸಲಹೆ ನೀಡಿದರು.
ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ, ಜವಾಬ್ದಾರಿಯುತವಾಗಿ ಕೆಲಸಮಾಡಬೇಕೆಂದು ಚಲುವರಾಯಸ್ವಾಮಿ ಸೂಚಿಸಿದರು.
ಬಿತ್ತನೆ ಬೀಜ, ರಸಗೊಬ್ಬರಗಳನ್ನು ಬೇಡಿಕೆಗಿಂತಲೂ ಹೆಚ್ಚು ಸರಬರಾಜು ಮಾಡಲಾಗಿದೆ, ಗೊಂದಲ ಇಲ್ಲದಂತೆ ವಿತರಣೆಮಾಡಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೆರವನ್ನೂ ಪಡೆಯಿರಿ ಎಂದು ಸಚಿವರು ನಿರ್ಧೇಶಿಸಿದರು.
ಕೃಷಿ ಆಯುಕ್ತ ವೈ. ಎಸ್ ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಪದ್ಮಯ್ಯನಾಯಕ್,ಕೃಷಿ ನಿರ್ದೇಶಕ ಡಾ ಜಿ.ಟಿ ಪುತ್ರ, ಅಪರ ನಿರ್ದೇಶಕ ವೆಂಕಟರಮಣ ರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.