ಮೈಸೂರು, ಜೂ.27: ಅರಮನೆಯ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಪಾರಿವಾಳಗಳ ಹಿಕ್ಕೆ ಹಾಗೂ ಪ್ರವಾಸಿಗರು, ಸಾರ್ವಜನಿಕರು ಪಾರಿವಾಳಗಳಿಗೆ ಹಾಕುವ ಅತಿಯಾದ ಆಹಾರ ಧಾನ್ಯಗಳಿಂದ ಅರಮನೆಯ ಸ್ವಚ್ಛತೆ ಹಾಗೂ ಸೌಂದರ್ಯ ಹಾಳಾಗುತ್ತಿದೆ ಎಂದು ಡಿಸಿ ಬೇಸರ ವ್ಯಕ್ತಪಡಿಸಿದರು.
ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ರಾಜೇಂದ್ರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರು ಪಾರಿವಾಳಗಳ ಹಿಂಡಿನ ಜತೆ ಸೆಲ್ಫೀ ತೆಗೆದುಕೊಳ್ಳುವುದು ಖುಷಿಕೊಡುತ್ತದೆ,ಆದರೆ ಇದು ಅರಮನೆಯ ಕಟ್ಟಡಕ್ಕೆ ಅಪಾಯಕಾರಿ ಜತೆಗೆ ಜಗತ್ಪ್ರಸಿದ್ದ ಅರಮನೆಯ ಸೌಂದರ್ಯಕ್ಕೆ ಧಕ್ಕೆ ಎಂಬ ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇಂದು ಡಿಸಿ ಸಭೆ ನಡೆಸಿ ದರು.
ಜೈನ್ ಸಂಸ್ಥೆ ವತಿಯಿಂದಲೂ ಸಹ ಪ್ರತಿನಿತ್ಯ ಪಾರಿವಾಳಗಳಿಗೆ 2 ಮೂಟೆ ಗೋಧಿ,ಜೋಳ, ಭತ್ತವನ್ನು ನೀಡುತ್ತಿದ್ದು, ಜೊತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಕೂಡಾ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇದರಿಂದ ಪಾರಿವಾಳಗಳು ಹೆಚ್ಚು ಬರುತ್ತವೆ ಅರಮನೆಯ ಕಟ್ಟಡದ ಮೇಲೆಲ್ಲಾ ಹಿಕ್ಕೆ ಹಾಕಿ ಅರಮನೆಗೆ ಹಾನಿಯುಂಟು ಮಾಡುತ್ತಿವೆ, ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳಲಿದೆ ಹಾಗಾಗಿ ಈಗಲೇ ಅದನ್ನು ತಡೆಗಟ್ಟಬೇಕು ಎಂದು ರಾಜೇಂದ್ರ ಸೂಚಿಸಿದರು.
ಅರಮನೆ ಮುಂದೆ ಪಾರಿವಾಳಗಳು ಕಾಳು ತಿನ್ನುವ ಸಂದರ್ಭ, ಅವುಗಳ ಹಾರುವ ದೃಶ್ಯ ಮನೋಹರವಾಗಿರುತ್ತದೆ, ಇದನ್ನು ಶೂಟ್ ಮಾಡಲು ಖ್ಯಾತ ಛಾಯಾ ಗ್ರಾಹಕರೂ ಆಗಮಿಸುತ್ತಾರೆ.
ಪಾರಿವಾಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಪರಿಗಣಿಸಿದ್ದಾರೆ, ಹಾಗಾಗಿ ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಅರಮನೆಯ ಅಧಿಕಾರಿಗಳು ಜೈನ್ ಸಂಸ್ಥೆಯೊಂದಿಗೆ ಮಾತನಾಡಿ ಅವಶ್ಯಕತೆ ತಕ್ಕಷ್ಟು ಆಹಾರವನ್ನು ನೀಡುವಂತೆ ಅವರಿಗೆ ಮಾಹಿತಿ ನೀಡಬೇಕು ಎಂದು ಡಿಸಿ ಮನವಿ ಮಾಡಿದರು.
ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಧಾನ್ಯಗಳನ್ನು ಹಾಕುತ್ತಿರುವುದರಿಂದ ಅರಮನೆಯ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದ್ದು, ಅದರ ಬಗ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಬ್ಬ ಸಹಾಯಕನನ್ನು ನೇಮಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಸಾದ್ ಉರ್ ರೆಹಮಾನ್ ಶರೀಫ್, ಅರಮನೆ ಉಪ ನಿರ್ದೇಶಕರಾದ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.