ಮೈಸೂರು,ಜೂ.29: ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಕೈ ಚೆಲ್ಲಿದೆ, ಆದ್ದರಿಂದ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಹಿರಿಯ ಸಾಹಿತಿ ಡಾ. ಸಿ ಪಿ ಕೃಷ್ಣಕುಮಾರ್
ಆಗ್ರಹಿಸಿದರು.
ಕಾವೇರಿ ಕ್ರಿಯಾಸಮಿತಿ ವತಿಯಿಂದ ಮೈಸೂರಿನ ಟೌನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಕಾವೇರಿ ನೀರಿಗಾಗಿ ಧರಣಿ ಸತ್ಯಾಗ್ರಹ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂಡಲೇ ತಮಿಳು ನಾಡು ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ಶಾಶ್ವತವಾದ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ಮೊದಲು ರಾಜ್ಯಕ್ಕೆ ಕುಡಿಯುವ ನೀರು, ರೈತರಿಗೆ ಬೆಳೆ ಬೆಳೆಯಲು, ತದನಂತರ ತಮಿಳುನಾಡಿಗೆ ನೀರು ಬಿಡಲು ಒಂದು ಸಂಕಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ಸಿದ್ದಪಡಿಸಬೇಕು ಎಂದು ಸಿಪಿಕೆ ಸಲಹೆ ನೀಡಿದರು.
ಈಗಿನ ರಾಜಕಾರಣಿಗಳು ನಾಡ ಪ್ರಭು ಕೆಂಪೇಗೌಡರಂತೆ ದೂರ ದೃಷ್ಟಿಯಿಂದ ನೆಲ ಜಲಗಳ ಬಗ್ಗೆ ಆಸಕ್ತಿಯನ್ನು ವಹಿಸಿ,ರಾಜ್ಯದ ಎಲ್ಲಾ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ತಿಳಿಸಿದರು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜೈಪ್ರಕಾಶ್ ಮಾತನಾಡಿ, ಕೂಡಲೇ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದು ಕಾರ್ಯ ಪ್ರವೃತ್ತರಾಗಬೇಕು ಒತ್ತಾಯಿಸಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್ .ಕೆ ರಾಮು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಎಂ ಬಿ ಮುಂಜೇಗೌಡ, ಕಾವೇರಿ ಕ್ರಿಯಾಸಮಿತಿ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎಂ ಜೆ ಸುರೇಶ ಗೌಡ, ತೇಜೇಶ್ ಲೋಕೇಶ್ ಗೌಡ, ಸಿಂಧುವಳಿ ಶಿವಕುಮಾರ್, ನಾಗರಾಜ್, ವರಕೂಡು ಕೃಷ್ಣೇಗೌಡ, ಕೃಷ್ಣಪ್ಪ, ಲಕ್ಷ್ಮೀ, ಪ್ರಭುಶಂಕರ್, ಮಹೇಶ್, ಆಟೋ ಮಹದೇವ್, ಮಂಜುಳಾ, ನೇಹಾ, ಭಾಗ್ಯಮ್ಮ, ಪ್ರಕಾಶ್, ಶಿವಲಿಂಗಯ್ಯ, ಪೈಲ್ವಾನ್ ಬಾಲಾಜಿ,ಕುಮಾರ್ ಗೌಡ, ಹನುಮಂತಯ್ಯ, ಬಲರಾಂ , ರಮೇಶ್, ಪ್ರಭಾಕರ್, ರವೀಶ್, ಅಕ್ಬರ್, ಸ್ವಾಮಿ ಗೌಡ, ಸಂಜಯ್ ,ವಿಷ್ಣು, ದರ್ಶನ್ ಗೌಡ, ಬಾಲು ಮತ್ತಿತರರು ಪಾಲ್ಗೊಂಡಿದ್ದರು.