Fri. Nov 1st, 2024

ಹಿರೇಹಳ್ಳಿಯಲ್ಲಿ ವಿಜೃಂಬಣೆಯ ಉಯ್ಯಾಲಮ್ಮ ಉತ್ಸವ

Share this with Friends

ಅರಕಲಗೂಡು,ಜೂ.29: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಿರೇಹಳ್ಳಿಯಲ್ಲಿ ಗ್ರಾಮ ದೇವತೆ ಉಯ್ಯಾಲಮ್ಮ ದೇವಿ ಉತ್ಸವವನ್ನು ವಿಜೃಂಬಣೆಯಿಂದ
ನೆರವೇರಿಸಲಾಯಿತು.

ಈ ಉತ್ಸವಕ್ಕೂ ಒಂದು ವಿಶೇಷತೆ ಇದೆ ಅದೇನೆಂದರೆ ಉಯ್ಯಾಲಮ್ಮ ದೇವಿ ಉತ್ಸವವನ್ನು ಈ ಗ್ರಾಮದ ಪ್ರತಿ ಜನಾಂಗದವರು ಸೇರಿ ಆಚರಿಸುತ್ತಾರೆ,ಇಲ್ಲಿ ಜಾತಿ, ಧರ್ಮ ಯಾವುದೇ ಬೇಧ ಇರುವುದಿಲ್ಲ ಜೊತೆಗೆ ಐದು ವರ್ಷಕ್ಕೆ ಒಮ್ಮೆ ಮಾತ್ರ ಆಚರಿಸುವ ಹಬ್ಬವಾಗಿದೆ.

ಕಳೆದ ಎಂಟು ವರ್ಷಗಳಿಂದ ಉತ್ಸವವನ್ನು ಆಚರಿಸಲಾಗಿರಲಿಲ್ಲ, ಐದು ವರ್ಷ ಮುಗಿದಿದ್ದರೂ ಎರಡು ವರ್ಷ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು ಏಳನೆ ವರ್ಷ ಬೇಡ ಎಂದು ತೀರ್ಮಾನಿಸಿದ ಗ್ರಾಮಸ್ಥರು ಕಡೆಗೆ 8ನೇ ವರ್ಷಕ್ಕೆ ಹಬ್ಬ ಆಚರಿಸಲು ತೀರ್ಮಾನಿಸಿದರು.

ಈ ಹಬ್ಬಕ್ಕಾಗಿ ಇಡೀ ಗ್ರಾಮದ ಜನರು ತಮ್ಮ ತಮ್ಮ ಮನೆಗಳನ್ನು ಸಂಪೂರ್ಣ ಶುಚಿಗೊಳಿಸಿ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುವಂತೆ ಮಾಡಿದ್ದರು.

ಹಬ್ಬದ‌ ವಾತಾವರಣ ಎಲ್ಲೆಡೆ ಮನೆ ಮಾಡಿರುತ್ತದೆ.ಅಂದು ಮೂವರು ಪುಟ್ಟ ಪರಿಶಿಷ್ಟ ಜಾತಿಯ ಬಾಲಕಿಯರು ಬೆಳಗಿನಿಂದ ಉಪವಾಸವಿರುತ್ತಾರೆ, ಸಂಜೆ ಉಯ್ಯಾಲಮ್ಮ ದೇವಿಯ ಮೂಲ ವಿಗ್ರಹದ ಆಭರಣಗಳನ್ನು ಇಟ್ಟಿರುವ ಅರಸು ಜನಾಂಗದ ಪಟೇಲರ ಮನೆಗೆ ಆ ಬಾಲಕಿಯರನ್ನು ಮಂಗಳವಾಧ್ಯಗಳ ಸಹಿತ ಕರೆತಂದು ಅವರಿಗೆ ತಂಬಿಟ್ಟು ಮತ್ತಿತರ ಸಿಹಿ,ಮೊಸರನ್ನ ತಿನ್ನಿಸಿ ಮತ್ತೆ ಮಂಗಳವಾಧ್ಯಗಳೊಂದಿಗೆ ಕೆರೆಗೆ ಕರೆದೊಯ್ದು ಅಲ್ಲಿಂದ ಪುಣ್ಯಜಲವುಳ್ಳ ಕಲಶಗಳನ್ನು ಹೊತ್ತು ಉಯ್ಯಾಲಮ್ಮ ಮೂಲದೇವಾಲಯಕ್ಕೆ ಬಂದು ಕಲಶಗಳನ್ನು ಹೊತ್ತು ಆಗಮಿಸುತ್ತಾರೆ.

ಪುಟ್ಟ ಬಾಲೆಯರು ಕಲಶ ಹೊತ್ತು ಹೊರಟ ಕೂಡಲೇ ಅದ್ದೂರಿ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.ಹರಕೆ ಹೊತ್ತವರು ರಥಕ್ಕೆ ಹರಕೆ ತೀರಿಸುತ್ತಾರೆ.ಪ್ರತಿ ಮನೆಯ ಮುಂದೆಯೂ ರಥಕ್ಕೆ ಪೂಜೆ ಸಲ್ಲಿಸುತ್ತಾರೆ.ಇದು ಬೆಳಗಿನ ಜಾವದ ತನಕವೂ ಮುಂದುವರಿಯುತ್ತದೆ.

ಈ ಹಬ್ಬಕ್ಕೆ ಪ್ರತಿ ಮನೆಯಲ್ಲೂ ಊಟೋಪಚಾರ ನಡೆಯುತ್ತದೆ.ಎಂಟು ವರ್ಷಗಳ ಬಳಿಕ ಉಯ್ಯಾಲಮ್ಮ ಉತ್ಸವ ಇದ್ದುದರಿಂದ ಈ ಬಾರಿ ಬಹಳ ಅದ್ದೂರಿಯಾಗೇ ನೆರವೇರಿತು.

ಈ ಊರಿನ ಅನೇಕರು ಮೈಸೂರು, ಬೆಂಗಳೂರು ಹೀಗೆ ಪಟ್ಟಣ ಸೇರಿರುವವರು ಕೂಡಾ ಗ್ರಾಮಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸಿದರು.ಜತೆಗೆ ದೂರದೂರುಗಳಿಂದ ಬಹಳಷ್ಟು ಸಂಬಂಧಿಕರು,ಸ್ನೇಹಿತರು ಕೂಡಾ ಆಗಮಿಸಿದ್ದರಿಂದ ಸಾವಿರಾರು ಮಂದಿ ಉಯ್ಯಾಲಮ್ಮ ಹಬ್ಬದಲ್ಲಿ ಪಾಲ್ಗೊಂಡರು

ರಾತ್ರಿ ಕೊಂಡೋತ್ಸವ ಕೂಡಾ ಇದ್ದುದರಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಭಕ್ತಿಯಿಂದ ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.


Share this with Friends

Related Post