ಬೆಂಗಳೂರು,ಜುಲೈ.1: ಇಂದಿನಿಂದ ಮೂರು ಹೊಸ ಕಾನೂನುಗಳು ಜಾರಿಗೆ ಬಂದಿದ್ದು,ಇದರ ಜಾರಿಗೆ ಒಂದು ಆ್ಯಪ್ ಮಾಡಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು,ಇನ್ನು ಮುಂದೆ ದಾಖಲಾಗುವ ಕೇಸ್ಗಳಿಗೆ ಅದು ಅನ್ವಯ ಆಗಲಿದೆ ಎಂದು ತಿಳಿಸಿದರು.
ಇದರ ಪರಿಣಾಮ ಹೇಗಿರಲಿದೆ ಎಂಬುದನ್ನ ಈಗಲೇ ಹೇಳಲು ಆಗಲಾರದು,ಕೆಲ ದಿನಗಳ ನಂತರ ಇದರ ಯಶಸ್ಸು ಗೊತ್ತಾಗುತ್ತದೆ. ಇವತ್ತಿನಿಂದ ಯಾವ ಕೇಸುಗಳು ಬರುತ್ತವೋ ಅವು ಹೊಸ ಕಾನೂನುಗಳಡಿ ದಾಖಲಾಗುತ್ತವೆ, ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ನೀಡಿದ್ದೇವೆ ಎಂದು ಹೇಳಿದರು.
ಇಡೀ ದೇಶದಲ್ಲಿ ಮೂರು ಕಾನೂನುಗಳು ಜಾರಿಯಾಗಿವೆ. ಫೀಡ್ ಬ್ಯಾಕ್ ನೋಡಿಕೊಂಡು ಪರಿಷ್ಕರಣೆ ಮಾಡಬಹುದು ಎಂದು ಪರಮೇಶ್ವರ್ ಹೇಳಿದರು.
ವಾಲ್ಮೀಕಿ ನಿಗಮ ಹಗರಣ ಕೇಸ್ ಬಗ್ಗೆ ಕೇಳಿದ ಪ್ರಶ್ನೆಗೆ ಈ ಕೇಸನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಎಸ್ಐಟಿ ಕೂಡ ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಲ್ಲುವುದಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತದೆ ಎಂದು ಕಡಕ್ಕಾಗಿ ತಿಳಿಸಿದರು.