ಬೆಂಗಳೂರು, ಜುಲೈ. 1: ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರು ಪ್ರೆಸ್ ಕ್ಲಬ್ , ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.
ಫೇಕ್ ನ್ಯೂಸ್ ಗಳ ಪತ್ತೆ ಮತ್ತು ನಿಯಂತ್ರಣಕ್ಕೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಫ್ಯಾಕ್ಟ್ ಚೆಕ್ ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್ ಅವರು ಪ್ರಧಾನ ಭಾಷಣದಲ್ಲಿ ಪತ್ರಿಕೋದ್ಯಮದ ಈ ಕ್ಷಣದ ಸ್ಥಿತಿಗತಿಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.