Mon. Dec 23rd, 2024

ಕಾಂಗ್ರೆಸ್‌ ಸರ್ಕಾರದ್ದು ಲೂಟಿ ಮಾಡಲ್‌: ಅಶೋಕ್ ವ್ಯಂಗ್ಯ

Share this with Friends

ಬೆಂಗಳೂರು, ಜು.3: ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷ ವಾಗುವಮೊದಲೇ ಲೂಟಿ ಹೊಡೆಯಲು ಸುರಂಗ ಕೊರೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಸರ್ಕಾರ ಲೂಟಿ ಮಾಡಲ್‌ ನೀಡಿದೆ ಎಂದು ವ್ಯಂಗ್ಯ ವಾಡಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನಿಲುವು ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ವೇಳೆ ಅವರು ಮಾತನಾಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ದಲಿತರ ಹಣವನ್ನು ತೆಲಂಗಾಣದ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ, ಚಿನ್ನದ ಅಂಗಡಿಗಳಿಗೆ ಟಕಾಟಕ್‌ ಎಂದು ವರ್ಗಾವಣೆ ಮಾಡಿದ್ದಾರೆ. ಬಿಜೆಪಿಯ ಹೋರಾಟದ ಫಲವಾಗಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ, ಈಗ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ಹಿಂದೆ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆಯೇ ಈಗ ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನಲ್ಲಿ ತುರ್ತು ಸ್ಥಿತಿ ಜಾರಿಗೊಳಿಸಿದೆ. ಬಿಜೆಪಿ ಶಾಸಕರು ಸಿಎಂ ಮನೆಗೆ ಬರಬಾರದೆಂದು ನೂರಾರು ಪೊಲೀಸರನ್ನು ನಿಯೋಜಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ ಭಯೋತ್ಪಾದಕರನ್ನು ಹಿಡಿಯಲು ಐದಾರು ಪೊಲೀಸರನ್ನು ಕಳುಹಿಸಿದ್ದರು. ಇಲ್ಲಿ ಶಾಸಕರನ್ನು ಹಿಡಿಯಲು ನೂರಾರು ಪೊಲೀಸರನ್ನು ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರ ಕೂಡಲೇ ಈ ನಿವೇಶನ ಯೋಜನೆಯನ್ನು ರದ್ದು ಮಾಡಬೇಕು. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬರಲಿದೆ ಎಂದು ಅಶೋಕ್ ಹೇಳಿದರು.


Share this with Friends

Related Post