ಬೆಂಗಳೂರು,ಜು.3: ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ರಾಜ್ಯಸರ್ಕಾರ ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನ ಮುಡಾದಲ್ಲೇ ಸುಮಾರು 4 ಸಾವಿರ ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಅನೇಕ ಪ್ರಭಾವಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇದನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.
ಮುಡಾದಲ್ಲಿ ಹಗರಣ ಹೊರಬರುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಭೆ ನಡೆಸಿದರು. ಅಕ್ರಮ ನಡೆದಿಲ್ಲ ಎಂದರೆ ಆಯುಕ್ತರು, ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತನಿಖೆಗೆ ಆದೇಶ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕುಟುಂಬದ ಮೇಲೆ ಆರೋಪ ಬಂದಾಗ ರಾಜ್ಯಸರ್ಕಾರದ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಆದ್ದರಿಂದ ಸಿಬಿಐ ತನಿಖೆಯೇ ಸರಿ ಎಂದು ಹೇಳಿದರು.
ಯತೀಂದ್ರ ಹಾಗೂ ಇತರರನ್ನು ರಕ್ಷಣೆ ಮಾಡುವ ಕಾರಣಕ್ಕಾಗಿಯೇ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.
ತಮ್ಮ ಬುಡಕ್ಕೂ ಹಗರಣ ಸುತ್ತಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಸಚಿವ ಸುರೇಶ್ ಅವರು ಹಗರಣದ ಕಡತವನ್ನು ರಾತ್ರೋರಾತ್ರಿ ತೆಗೆದುಕೊಂಡು ಬಂದಿದ್ದಾರೆ. ಈಗ ಏನೂ ಇಲ್ಲ ಎಂದು ಎಲ್ಲವನ್ನೂ ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ವಿಜಯೇಂದ್ರ ಟೀಕಿಸಿದರು.