ಆಸ್ತಮಾ ಒಂದು ದೀರ್ಘಕಾಲದ ಒಂದು ಕಾಯಿಲೆ. ಇದನ್ನು ಗೂರಲು, ಉಬ್ಬಸ ಮತ್ತು ದಮ್ಮು ಎಂದು ಸಹ ಕರೆಯಲಾಗುತ್ತದೆ. ಇದು ಶ್ವಾಸಕೋಶದ ಸಮಸ್ಯೆಯಾಗಿದ್ದು, ಉಸಿರಾಟದ ನಾಳ ಅಥವಾ ಶ್ವಾಸನಾಳದಲ್ಲಿ ತೀವ್ರ ತೊಂದರೆ ಉಂಟು ಮಾಡುತ್ತದೆ. ಆಸ್ತಮಾ ಲಕ್ಷಣಗಲು ಈ ಕೆಳಕಂಡಂತಿರುತ್ತದೆ.
ಅಸಮರ್ಪಕ ಉಸಿರಾಟ/ಉಸಿರಾಟದ ತೊಂದರೆ. ಎದೆಯಲ್ಲಿ ಬಿಗಿ ಹಿಡಿತ ಅಥವಾ ಒತ್ತಡದ ಅನುಭವ. ಪದೇ ಪದೇ ಮೇಲಿನ ಶ್ವಾಸನಾಳ ಸೋಂಕು ಮತ್ತು ಉಬ್ಬಸ. ಕೆಮ್ಮು-ಸಾಮಾನ್ಯವಾಗಿ ಒಣ ಕೆಮ್ಮು ಮತ್ತು ಹಗುರ ಕೆಮ್ಮು.ಇಂದಿನ ಒತ್ತಡದ ಆಧುನಿಕ ನಗರ ಜೀವನದಿಂದಾಗಿ ಆಸ್ತಮಾ ತೀವ್ರ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಕ್ಕಳು ದೊಡ್ಡವರಿಗಿಂತ ಹೆಚ್ಚಾಗಿ ಆಸ್ತಮಾ ರೋಗದಿಂದ ಬಳಲುತ್ತಿದ್ದಾರೆ. ಬಾಲಕಿಯರಿಗಿಂತ ಬಾಲಕರಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ.
ಆಸ್ತಮಾ ರೋಗದ ಆಕ್ರಮಣವು ಒಂದೇ ರೀತಿಯಲ್ಲಿ ಇರುವುದಿಲ್ಲ. ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರಲ್ಲಿ ಇದು ತೀವ್ರ ಸ್ವರೂಪದ್ದಾಗಿದ್ದರೆ, ಹಲವರಲ್ಲಿ ಸೌಮ್ಯ ರೀತಿಯಲ್ಲಿ ಇರುತ್ತದೆ. ಅನೇಕ ಮಂದಿಯಲ್ಲಿ ಆಸ್ತಮಾ ಸಮಸ್ಯೆ ಯಾವಾಗಲಾದರೊಮ್ಮೆ ಕಂಡುಬಂದರೆ, ಇತರರಲ್ಲಿ ಇದು ಪ್ರತಿನಿತ್ಯ ಕಾಡುವ ಯಾತನಾಮಯ ಕಾಯಿಲೆಯಾಗಿರುತ್ತದೆ. ಈ ರೋಗಕ್ಕೆ ಸಕಾಲದಲ್ಲಿ ಸೂಕ್ತವಾದ ಮತ್ತು ಸರಿಯಾದ ಚಿಕಿತ್ಸೆ ನೀಡದಿದ್ದರೆ ಇದು ಗಂಡಾಂತರಕಾರಿಯಾಗಿ ಪರಿಣಮಿಸುತ್ತದೆ. ಆದ್ದರಿಂದ ಆಸ್ತಮಾ ರೋಗಕ್ಕೆ ಕಡ್ಡಾಯ ಚಿಕಿತ್ಸೆ ನೀಡುವುದು ಅನಿವಾರ್ಯ.
ಆಯುರ್ವೇದ ವೈದ್ಯಕೀಯ ಪದ್ದತಿಯಲ್ಲಿ ಕಾಯಿಲೆಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಇದೆ. ಪ್ರಾಚೀನ ಕಾಲದ ಸಂಶೋಧನೆ ಮತ್ತು ಅನುಭವಗಳ ಫಲವಾಗಿ, ಆಸ್ತಮಾ ಸಮಸ್ಯೆಯನ್ನು ‘ಕಫ ದೋಷ’ ಎಂದು ವರ್ಗೀಕರಿಸಲಾಗಿದೆ. ಅಂದರೆ ಇದು ‘ಆಮ’ ಕ್ರೋಢೀಕರಣದ ಪರಿಣಾಮ ಎಂದರ್ಥ (ಆಮ ಎಂದರೆ ಅಜೀರ್ಣವಾದ ಮತ್ತು ವಿಸರ್ಜಿಸಲ್ಪಡದ ಆಹಾರ ವಸ್ತುಗಳಿಂದ ಉತ್ಪತ್ತಿಯಾಗುವ ವಿಷ).
ಉಸಿರಾಟದ ವ್ಯವಸ್ಥೆಯಲ್ಲಿ ಅಧಿಕ ಕಫ ಮತ್ತು ಸಿಂಬಳ ಸಮಸ್ಯೆ ಉಂಟಾಗುತ್ತದೆ. ಆದಾಗ್ಯೂ ಮಾನವನ ಶರೀರ ತುಂಬಾ ಜಾಣ್ಮೆ ಮತ್ತು ಬುದ್ದಿಯುಳ್ಳದ್ದು. ಮನುಷ್ಯನಿಗೆ ಪ್ರಕೃತಿದತ್ತವಾದ ರೋಗ ನಿವಾರಣೆ ವ್ಯವಸ್ಥೆಯು ದೈವ ಪ್ರದತ್ತವಾದ ಕೊಡುಗೆಯಾಗಿದೆ. ದೇಹದ ಕೆಲವು ಸಮಸ್ಯೆಗಳು ತನಗೆ ತಾನೇ ಪರಿಹಾರವಾಗುತ್ತದೆ. ಆದರೆ, ದೇಹದಲ್ಲಿ ವಿಷಯುಕ್ತ ವಸ್ತುಗಳು ಹೆಚ್ಚಾದಷ್ಟೂ ಶರೀರದ ನೈಸರ್ಗಿಕ ಸಾಮಥ್ರ್ಯ ಇಳಿಮುಖವಾಗುತ್ತದೆ. ಹೀಗಾಗಿ ಆಯುರ್ವೇದವು ಮೊದಲು ಚಿಕಿತ್ಸೆಗಿಂತ ರೋಗಕ್ಕೆ ಮೂಲ ಕಾರಣವಾಗುವ ಅಂಶಗಳನ್ನು ಪತ್ತೆ ಹಚ್ಚುವತ್ತ ಬೆಳಕು ಚೆಲ್ಲುತ್ತದೆ. ಅಂದರೆ, ಚಿಕಿತ್ಸೆಯು ಆಸ್ತಮಾ ಮೇಲೆ ಆಕ್ರಮಣ ಮಾಡುವುದಕ್ಕಿಂತ, ಈ ರೋಗಕ್ಕೆ ಕಾರಣವಾಗುವ ಅಂಶಗಳತ್ತ ದಾಳಿ ಮಾಡುತ್ತದೆ.
ಚಿಕಿತ್ಸೆಹೇಗೆ..?
ಇಂಥ ದೋಷ ಮತ್ತು ವಿಷಗಳನ್ನು ನಿರ್ಮೂಲನೆ ಮಾಡಲು ಆಯುರ್ವೇದದಲ್ಲಿ ಮಹತ್ವದ ಚಿಕಿತ್ಸೆಗಳಿವೆ, ಇಂಥ ಕೆಲವು ಚಿಕಿತ್ಸೆಗಳಲ್ಲಿ ಪ್ರಮುಖವಾದುದೆಂದರೆ ವಾಮನ (ವಾಂತಿ ಅಥವಾ ದೋಷ) ಮತ್ತು ವಿರೇಚನ (ಶುದ್ಧೀಕರಣ ಚಿಕಿತ್ಸೆ).
ವಾಮನ (ವಾಂತಿ ಅಥವಾ ದೋಷ) ಮತ್ತು ವಿರೇಚನ (ಶುದ್ಧೀಕರಣ ಚಿಕಿತ್ಸೆ) : ವಾಮನ ಒಂದು ಆಯುರ್ವೇದ ಚಿಕಿತ್ಸಾ ವಿಧಾನವಾಗಿದ್ದು, ಇದರಲ್ಲಿ ದೇಹ ಮತ್ತು ಶ್ವಾಸ ಮಾರ್ಗದಲ್ಲಿನ ಮೂಲದಲ್ಲಿ (ಹೊಟ್ಟೆ) ಸಂಗ್ರಹವಾದ ತ್ಯಾಜ್ಯ ಉತ್ಪನ್ನವನ್ನು (ಕಫ ವಿಷ) ನಿರ್ಮೂಲನೆಗೊಳಿಸಲಾಗುತ್ತದೆ. ಇದನ್ನು ಬಾಯಿಯ ಮೂಲಕ ವಾಂತಿ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಈ ಚಿಕಿತ್ಸೆಯು ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಸಡಿಲಗೊಳಿಸಿ, ಒಂದೆಡೆ ಕ್ರೋಢೀಕರಿಸಿ ಅಂತಿಮವಾಗಿ ಹೊರದೂಡುವ ವಿಧಾನವಾಗಿದೆ. ಇಂಥ ವಿಷವಸ್ತು ಮತ್ತು ಕಶ್ಮಲಗಳನ್ನು ವಾಂತಿ ಮೂಲಕ ಹೊರ ಹಾಕಿದ ನಂತರ ರೋಗಿಯು ತುಂಬಾ ಆರಾಮವಾಗುತ್ತಾನೆ. ಎದೆಯಲ್ಲಿನ ಒತ್ತಡ, ಉಬ್ಬಸ, ಗೂರಲು ಮತ್ತು ಉಸಿರಾಟದ ತೊಂದರೆ ಮಾಯಾವಾಗುತ್ತದೆ. ಇವುಗಳೊಂದಿಗೆ ನಾಸಿಕ ರಂಧ್ರ (ಮೂಗಿನ ಹೊಳ್ಳೆಗಳ ಮಾರ್ಗ) ಸ್ವಚ್ಚವಾಗುತ್ತದೆ. ಆಕ್ರಮಣಕ್ಕೆ ಕಾರಣವಾಗುವ ಮೂಲವನ್ನು ಮೂಲೋತ್ಪಾಟನೆ ಮಾಡಲು ಬೇರು ಮಟ್ಟದಿಂದಲೇ ಶುದ್ಧೀಕರಣ ಪ್ರಕ್ರಿಯೆ ಅಥವಾ ಚಿಕಿತ್ಸೆ ನಡೆಯುವುದರಿಂದ ಇದು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.
ವಾಮನ ಚಿಕಿತ್ಸೆ ನಂತರ, ವಿರೇಚನ ಚಿಕಿತ್ಸೆ ಮಹತ್ವದ ಪಾತ್ರ ವಹಿಸುತ್ತದೆ. ವಾಮನ ಚಿಕಿತ್ಸೆ ಬಳಿಕ, ಮುಮದೆ ಉತ್ಪತ್ತಿಯಾಗಬಹುದಾದ ವಿಷಯುಕ್ತ ವಸ್ತುಗಳನ್ನು ತಡೆಗಟ್ಟುವಲ್ಲಿ ಕೆಲಸ ಮಾಡುವ ಆಂತರಿಕ ಔಷಧವೇ ವಿರೇಚನ. ಇದು ಶರೀರದ ರೋಗ, ಪ್ರತಿರೋಧಕ ಶಕ್ತಿಯನ್ನು ಸದೃಢಗೊಳಿಸಿ, ಉಸಿರಾಟದ ವ್ಯವಸ್ಥೆಯನ್ನು ಯಾವುದೇ ಅಡೆತಡೆಗಳಿಲ್ಲದೇ ಕ್ರಮಬದ್ಧಗೊಳಿಸಲಾಗುತ್ತದೆ. ಅಲ್ಲದೇ, ಈ ಚಿಕಿತ್ಸೆಯಿಂದ ನಮ್ಮ ದೇಹವು ಸ್ವಾವಲಂಬನೆಯ ಸ್ವರಕ್ಷಣೆ, ಸಾಮಥ್ರ್ಯ, ಜೀವಶಕ್ತಿ ಹಾಗೂ ಮಾನಸಿಕ ಸ್ವಾಸ್ಥ್ಯ ಹೊಂದುತ್ತದೆ. ಆದರೆ, 14 ವರ್ಷದೊಳಗಿನ ಮಕ್ಕಳು ಮತ್ತು ವಯೋವೃದ್ದರಿಗೆ ಕೆಲವು ಮಾತ್ರೆಗಳು ಮತ್ತು ಸಿರಪ್‍ಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.