Mon. Dec 23rd, 2024

ಮುಡಾ ನಿವೇಶನ ಹಂಚಿಕೆ; ರಾಜಕೀಯ ಪ್ರೇರಿತ ಆರೋಪ- ಸಿಎಂ

Share this with Friends

ಬೆಂಗಳೂರು,ಜು.4: ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿ ಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು

ಸುದ್ದಿಗಾರರೊಂದಿಗೆ ಮಾತನಾಡಿದ‌ ಸಿಎಂ,
ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ, ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ ಎಂದು ಟಾಂಗ್ ನೀಡಿದರು.

ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ. ಹಾಗಿದ್ದಲ್ಲಿ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಲಿ ಎಂದು ಸಿದ್ದು ಹೇಳಿದರು.

ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ,ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ನಿವೇಶನ ನೀಡಿರುವುದು 2021 ನೇ ಇಸವಿಯಲ್ಲಿ,ಆಗ ಬಿಜೆಪಿ ಅಧಿಕಾರದಲ್ಲಿತ್ತು, ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ ಎಂದು ಸಿಎಂ ಪ್ರಶ್ನಿಸಿದರು.

ವಿಜಯನಗರ 3 ನೇ ಅಥವಾ 4 ನೇ ಹಂತದಲ್ಲಿ ಕೊಡಿ ಎಂದು ನಾವು ಕೇಳಲಿಲ್ಲ, ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ ಅಷ್ಟೇ,ಆದರೆ ಇದೆಲ್ಲ ರಾಜಕೀಯ ಪ್ರೇರಿತ ಆಪಾದನೆ ಎಂದು ದೂರಿದರು.

ಭೂ ಸ್ವಾಧೀನವಾದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆಯಲ್ಲಾ ಎಂಬ ಪರ್ತಕರ್ತರ ಪ್ರಶ್ನೆಗೆ, ನಾವು ಇಂಥ ಕಡೆಯೇ ನಿವೇಶನ ಕೊಡಿ ಎಂದು ಕೇಳಿರಲಿಲ್ಲ, ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ ಎಂದು ಪ್ರತಿಕ್ರಿಯಿಸಿದರು.

ಅಕ್ಟೋಬರ್ 2023 ರಲ್ಲಿ ಸಚಿವರು 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ.

ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ,ನನಗೆ 62 ಸಾವಿರ ಕೋಟಿ ಕೊಟ್ಟುಬಿಡಲಿ ಎಂದು ಸಿದ್ದರಾಮಯ್ಯ ತಿಳಿಸಿದರು.


Share this with Friends

Related Post