ಬೆಂಗಳೂರು, ಜು.6: ಸಿಎಂ ಸಿದ್ದರಾಮಯ್ಯ ಅಕ್ಷರಶಃ ಮಾಸ್ಟರ್ ಆಗಿಬಿಟ್ಟಿದ್ದರು.
ನಿನ್ನೆ ದಿಢೀರನೆ ಚಾಮರಾಜಪೇಟೆಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ ತಾವು ಮುಖ್ಯ ಮಂತ್ರಿ ಎಂಬುದನ್ನು ಮರೆತು ಎಲ್ಲಾ ಜಂಜಡಗಳನ್ನು ಬಿಟ್ಟು ಮಕ್ಕಳೊಂದಿಗೆ ಕಾಲ ಕಳೆದರು.
ಈ ವೇಳೆ ಸಂಧಿ ಎಂದರೇನು, ಸಂಧಿಗಳಲ್ಲಿ ಎಷ್ಟು ವಿಧ, ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ, ಅವಲ್ಲಿ ಯೋಗವಾಹಗಳು ಎಷ್ಟು, ಸ್ವರ ಎಂದರೇನು? ವ್ಯಂಜನಗಳು ಎಂದರೇನು, ಎಷ್ಟು ವಿಧ, ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ,ಅಲ್ಪಪ್ರಾಣ, ಮಹಾಪ್ರಾಣ ಎಂದರೇನು, ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಹೀಗೆ ಪ್ರಶ್ನೆಗಳನ್ನು ಕೇಳಿದರು.
ನಂತರ ಮಕ್ಕಳು ಖುಷಿಯಿಂದ ನೀಡಿದ ಉತ್ತರಗಳನ್ನು ತಿದ್ದಿ ಹೇಳಿದರು.
ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂಬ ಪ್ರಶ್ನೆಗೆ
ನೀವೇ ಆರಂಭಿಸಿದ್ದು ಎಂದು ವಿದ್ಯಾರ್ಥಿ ಉತ್ತರಿಸಿದ,ಆದರೆ ಇಸವಿ ಹೇಳಲಿಲ್ಲ.
ಅದಕ್ಕೆ ನಗುತ್ತಾ 94-95 ರಲ್ಲಿ ಆರಂಭಿಸಿದ್ದಾಗಿ ಸಿಎಂ ಹೇಳಿದರು.
ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿದರು.ಮಕ್ಕಳೊಂದಿಗೆ ಸಿದ್ದರಾಮಯ್ಯ ಊಟ ಕೂಡಾ ಮಾಡಿದ್ದು ವಿಶೇಷವಾಗಿತ್ತು.