Fri. Nov 1st, 2024

ಮಹಾರಾಜರೆಂಬ ಭಾವನೆ ಇದ್ದರೆ ಪ್ರಗತಿ ಸಾಧ್ಯವಿಲ್ಲ;ಡಿಸಿಗಳ ವಿರುದ್ಧ ಸಿ.ಎಂ ಗರಂ

Share this with Friends

ಬೆಂಗಳೂರು, ಜು.8: ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮರೆಯದೆ ಜನಸೇವೆ ಮಾಡಿ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿದ್ದರಾಮಯ್ಯ ನಿಷ್ಟುರವಾಗಿಯೇ ಮಾತನಾಡಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ,ಎಸ್ ಪಿ,ಸಿಇಒ ಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು,ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿ ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯ ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಈಗಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಎಚ್ಚರಿಕೆ ನೀಡಿದರು.

ಡಿಸಿಗಳು,ಸಿಇಒ ಗಳು, ತಮ್ಮ ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಅಂಗೈಯಲ್ಲಿ ಇಟ್ಟುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರಗತಿ ಮತ್ತು ಅಭಿವೃದ್ಧಿಗೆ ವೇಗ ಪಡೆಯಲು ಸಾಧ್ಯ ಎಂದು
ಹೇಳಿದರು.

ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು.‌ 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಗುಡ್ ಗೌರ್ನೆನ್ಸ್ ನಲ್ಲಿ ಮಾದರಿ ರಾಜ್ಯವಾಗಿದೆ ಎನ್ನುವುದನ್ನು ಮರೆಯಬಾರದು. ಈ ಹೆಗ್ಗಳಿಕೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೆಲವು ಜಿಲ್ಲೆಗಳಲ್ಲಿ ಕುಸಿತ ಕಂಡಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈ ಬಾರಿ ಕಾಪಿಯನ್ನು ಸಂಪೂರ್ಣ ನಿಲ್ಲಿಸಿದ್ದು ಶ್ಲಾಘನೀಯ. ಆದರೆ ಈ ಕಾರಣಕ್ಕೆ ಫಲಿತಾಂಶ ಕುಸಿತ ಆಯಿತು ಎನ್ನುವ ಸಮರ್ಥನೆ ಸರಿಯಲ್ಲ ತಿಳೀತಾ ಎಂದು ಸಿದ್ದು ಹೇಳಿದರು.

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು, ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು, ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯ ಕುರಿ ಕಳ್ಳತನ ತಡೆಯಲು ಇದು ಅಗತ್ಯ ಎಂದು ಸಿಎಂ ಹೇಳಿದರು.

ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ, ಉಪವಿಭಾಹಾಧಿಕಾರಿಗಳ ಬಳಿ ಆರ್ ಆರ್ ಟಿ(ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಇವುಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟವು 7522 ಪ್ರಕರಣಗಳಿವೆ,ಡಿಸಿ ಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. 5 ವರ್ಷಕ್ಕೂ ಮೇಲ್ಪಟ್ಟವು 4207 ಪ್ರಕರಣಗಳಿವೆ.ಜಿಲ್ಲಾಧಿಕಾರಿ ಗಳೇ ಬಾಕಿ ಉಳಿಸಿಕೊಂಡರೆ ನೀವು ಎಸಿ ಮತ್ತು ತಹಶೀಲ್ದಾರ್ ಗಳಿಗೆ ಏನು ಸೂಚನೆ ಕೊಡ್ತೀರಿ ಎಂದು ಮುಖ್ಯ ಮಂತ್ರಿ ಖಾರವಾಗಿ ಪ್ರಶ್ನಿಸಿದರು


Share this with Friends

Related Post