ಹಾಸನ,ಜು.8: ಆಹಾರ ಅರಸಿ ಊರೊಳಗೆ ಬಂದ ಚಿರತೆ ಕಂಡು ಗ್ರಾಮದ ಜನತೆ ಹೌಹಾರಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಜಾವಗಲ್ ಹೊರವಲಯದ ನೇರ್ಲಿಗೆ -ಕಡೂರು ರಸ್ತೆಯಲ್ಲಿರುವ ಇಂದ್ರೇಶ್ ಎಂಬುವವರ ತೋಟದ ಮನೆಯ ಬಳಿ ನೆನ್ನೆ ರಾತ್ರಿ 8.30 ರ ವೇಳೆ ಆಹಾರ ಹುಡುಕುತ್ತಾ ಚಿರತೆ ಬಂದಿದೆ.
ಮನೆಯ ಬಳಿಗೇ ಬಂದ ಚಿರತೆಯನ್ನು ಕಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ,
ಈ ವೇಳೆ ಮನೆಯೊಳಗೆ ಇದ್ದ ಮಹಿಳೆ ಕಿಟಕಿ ಯಿಂದ ಚಿರತೆಯನ್ನು ಕಂಡು ಶಬ್ದ ಮಾಡಿದ್ದಾರೆ, ನಂತರ ಚಿರತೆ ಅಲ್ಲಿಂದ ಹೋಗಿದೆ,ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿರುವ ಇಂದ್ರೇಶ್ ಕುಟುಂಬಸ್ಥರು ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಅರಸೀಕೆರೆ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಚಿರತೆ ಹಾವಳಿ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿದ್ದು ಮನೆಯ ಸಾಕು ನಾಯಿ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆ ನಡೆಸಿ ಚಿರತೆ ಹಾವಳಿಯನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.