Thu. Dec 26th, 2024

ಆಷಾಢ ಶುಕ್ರವಾರ:ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ

Share this with Friends

ಮೈಸೂರು,ಜು.9: ಚಾಮುಂಡಿಬೆಟ್ಟದ ದೇವಾಲಯದಲ್ಲಿ ನಡೆಯುವ ಆಷಾಡ ಮಾಸದ ಪ್ರಯುಕ್ತ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳು ಮತ್ತಿತರ ವ್ಯವಸ್ಥೆ ಮಾಡಲಾಗಿದೆ ಎಂದು ಜಿ. ಲಕ್ಷ್ಮೀ ಕಾಂತ ರೆಡ್ಡಿ ತಿಳಿಸಿದ್ದಾರೆ.

ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಇದೇ ಜುಲೈ 12, 19, 26 ಮತ್ತು ವರ್ದಂತಿ ದಿನವಾದ ಜುಲೈ 27 ಹಾಗೂ ಆಗಸ್ಟ್ 02 ಕಡೆಯ ಆಷಾಡ ಶುಕ್ರವಾರ ದಿನಗಳಂದು ಮಾತ್ರ ದೇವಾಲಯದ ವತಿಯಿಂದ ಕೆ.ಎಸ್.ಆರ್.ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಚಾಮುಂಡಿಬೆಟ್ಟಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ ‌

ಆಷಾಡ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕ ವಾಹನಗಳನ್ನು ಚಾಮುಂಡಿಬೆಟ್ಟದ ಪ್ರವೇಶಕ್ಕೆ ನಿಷೇಧಿಸಲಾಗಿದೆ, ಲಲಿತಾ ಮಹಲ್ ಪಾರ್ಕಿಂಗ್ ನಲ್ಲಿಯೇ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಿ, ಕೆ.ಎಸ್.ಆರ್.ಟಿಸಿ ವಾಹನಗಳ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಚಾಮುಂಡಿಬೆಟ್ಟಕ್ಕೆ ಬರಬೇಕಿದೆ(ಶಕ್ತಿ ಯೋಜನೆ ಅನ್ವಯಿಸುತ್ತದೆ).

ಚಾಮುಂಡಿಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಚಾಮುಂಡಿಬೆಟ್ಟ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ಸ್ ಹಾಜರುಪಡಿಸಿ ಪರಿಶೀಲನೆಗೆ ಒಳಪಡಿಸಿ ಪ್ರವೇಶ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ, ಸಾರ್ವಜನಿಕರು ರೂ.300 ಗಳ ಪ್ರವೇಶ, ರೂ50 ಗಳ ಪ್ರವೇಶ ಮತ್ತು ಸರ್ವದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶವನ್ನು ಪಡೆಯಬಹುದು.

ಭಕ್ತಾದಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಲಲಿತಾಮಹಲ್ ಪಾರ್ಕಿಂಗ್ ಮತ್ತು ಮಹಿಷಾಸುರ ವೃತ್ತದ ಬಳಿ ಹಾಗೂ ವಿಶೇಷ ಪ್ರವೇಶದ ಬಳಿಯಲ್ಲಿಯೇ ಪ್ರವೇಶದ ಟಿಕೇಟ್ ಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಚಾಮುಂಡಿಬೆಟ್ಟಕ್ಕೆ ಯಾವುದೇ ಪ್ಲಾಸ್ಟಿಕ್ ತರುವುದನ್ನು ನಿಷೇದಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ತಂದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಷಾಡ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗುವುದರಿಂದ ಸೂಕ್ತ ಭದ್ರತೆಗೆ ಸಿಸಿ ಕಾಮೆರಾ ವ್ಯವಸ್ಥೆಯ ಜೊತೆಗೆ ಧ್ವನಿ ವರ್ಧಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಕ್ತಾಧಿಗಳು ಸಹಕರಿಸಬೇಕು‌ ಎಂದು ಲಕ್ಷ್ಮಿಕಾಂತರೆಡ್ಡಿ ಮನವಿ ಮಾಡಿದ್ದಾರೆ.


Share this with Friends

Related Post