ಟಿ.ನರಸೀಪುರ, ಜು.9: ಒಂಭತ್ತನೆ ತರಗತಿಯ ಪಠ್ಯಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರ ಜಾಗತಿಕ ಮಟ್ಟದ ವಿಚಾರ ಚಿಂತನೆ ಯನ್ನು ತಿಳಿಸಿರುವ ರಾಜ್ಯಸರ್ಕಾರಕ್ಕೆ ಲಿಂಗಾಯತ ಮಹಾಸಭಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು
ತಿ.ನರಸೀಪುರದ ನಂಜನಗೂಡು ರಸ್ತೆಯಲ್ಲಿ ರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ ಬಸವಯೋಗಿಪ್ರಭುಗಳು ಮಾತನಾಡಿದರು.
ಹಿಂದೆ ರೋಹಿತ್ ಚಕ್ರ ತೀರ್ಥ ಮಾಡಿದ ತಪ್ಪನ್ನು ಪ್ರಸ್ತುತ ರಾಜ್ಯದ ಸರ್ಕಾರ ಸರಿ ಮಾಡಿದೆ.ಬಸವಣ್ಣನವರ ನೈಜ ಚರಿತ್ರೆ ಮತ್ತು ಚಿಂತನೆಯನ್ನು ಮುಖ್ಯಮಂತ್ರಿ ಸಿದ್ಧ ರಾಮಯ್ಯ ನವರ ಸರ್ಕಾರ ಒಂಬತ್ತನೇಯ ಪಠ್ಯಪುಸ್ತಕ ದಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂದು ಶ್ರೀಗಳು ತಿಳಿಸಿದರು.
ಬಸವಣ್ಣನವರು ಜಗತ್ತಿಗೆ ಇಷ್ಟಲಿಂಗದ ಪರಿಕಲ್ಪನೆಯನ್ನು ಕೊಟ್ಟರು ಎಂಬ ಸತ್ಯಸಂಗತಿ ಮತ್ತು ಸಂದೇಶ ಮಕ್ಕಳಿಗೆ ಗೊತ್ತಾದರೆ ಬಸವಣ್ಣನವರ ವಚನ ಜಾಗತಿಕ ಮಟ್ಟದಲ್ಲಿ ತಲುಪುತ್ತವೆ ಎಂದು ಸರ್ಕಾರಕ್ಕೆ ಮತ್ತು ಪಠ್ಯ ಪುಸ್ತಕ ಸಮಿತಿಗೆ ಅಭಿನಂದನೆಯನ್ನು ಬಸವಯೋಗಿ ಪ್ರಭುಗಳು ಸಲ್ಲಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಬಸವಣ್ಣನವರ ಚಿಂತನೆಯ ವಿರೋಧಿಗಳ ಮಾತಿಗೆ ಮಣೆ ಹಾಕದೇ ಒಂಬತ್ತನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಅಧ್ಯಾಯ ಮುಂದುವರೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ, ಕಾರ್ಯದರ್ಶಿ ತುಂಬಲ ಬಸವಣ್ಣ , ಕುರುಬೂರು ಭೃಂಗೀಶ್, ಚೌಹಳ್ಳಿ ಲಿಂಗರಾಜಪ್ಪ, ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಪರಶಿವ, ದೊಡ್ಡನಹುಂಡಿ ಸೋಮಶೇಖರ, ಸತೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.