ಬೆಂಗಳೂರು, ಜು.10: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಸರ್ಕಾರದ ಸಂಚಿನ ಹಿಂದೆ ರಾಮ ದ್ವೇಷ, ರಿಯಲ್ ಎಸ್ಟೇಟ್ ಲಾಲಸೆ ಅಡಗಿರುವುದು ಸುಸ್ಪಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಬೆಂಗಳೂರಿನ ಜನತೆಗೆ ಮೋಸ ಮಾಡಿದ್ದಾಯ್ತು, ಈಗ ಹೆಸರು ಬದಲಾವಣೆ ಮಾಡುವ ಮೂಲಕ ರಾಮನಗರದ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತೀದ್ದೀರಲ್ಲ, ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಅಭಿವೃದ್ಧಿ ಆಗಿಬಿಡುತ್ತದಾ ಎಂದು ಕಾರವಾಗಿ ಜಾಡಿಸಿದ್ದಾರೆ.
2007ರಲ್ಲಿ ರಾಮನಗರವನ್ನ ಪ್ರತ್ಯೇಕ ಜಿಲ್ಲೆ ಮಾಡಿದ್ದು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ,ತಮ್ಮ ಸಹೋದರನನ್ನ ಸೋಲಿಸಿದ ಬಿಜೆಪಿ – ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ರಾಮನಗರದಲ್ಲಿ ರಾಮನ ಹೆಸರು ಇರಬಾರದೆಂದು ತಮ್ಮ ನಾಯಕ ರಾಹುಲ್ ಗಾಂಧಿ ಅವರು ಆದೇಶ ಮಾಡಿದ್ದಾರೆಯೋ ಅಥವಾ ಮೈಸೂರಿನಲ್ಲಿ ಭೂಕಬಳಿಕೆ ಮಾಡಿದ್ದು ಸಾಲದು ಅಂತ ಈಗ ರಾಮಾನಗರದಲ್ಲೂ ರಿಯಲ್ ಎಸ್ಟೇಟ್ ದಂಧೆ ಶುರು ಮಾಡಲು ಹೊರಟಿದ್ದೀರೋ ಎಂದು ಅಶೋಕ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.