Wed. Dec 25th, 2024

ಸುಲಿಗೆ ಯತ್ನ; ಕೇರಳದಲ್ಲಿ ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿ ದಿವ್ಯಾ ಅರೆಸ್ಟ್

Share this with Friends

ಬೆಂಗಳೂರು, ಜು.11: ಮಸಾಜ್ ಪಾರ್ಲರ್ ಹೆಸರಿನಲ್ಲಿ ಬೆದರಿಕೆ ಹಾಕಿ ಸುಲಿಗೆ ಯತ್ನ ನಡೆಸಿದ ಪ್ರಕರಣದ‌ ಪ್ರಮುಖ ಆರೋಪಿ
ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿ ದಿವ್ಯಾ ವಸಂತಳನ್ನು ಬಂಧಿಸಲಾಗಿದೆ.

ಪ್ರಕರಣ ಬಯಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿಯೂ ಆದ ದಿವ್ಯಾಳನ್ನು ನೆರೆಯ ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು ಎಂದು ಹೇಳಿ ವೈರಲ್‌ ಆಗಿದ್ದ ಮಾಜಿ ನಿರೂಪಕಿ ದಿವ್ಯಾ ವಸಂತ ಇಂದಿರಾನಗರದ ಮಸಾಜ್ ಪಾರ್ಲರ್ ನಲ್ಲಿ ಶ್ರೀಮಂತ ಗ್ರಾಹಕರಿಗೆ ಗಾಳಹಾಕಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾಕೆ.

ಆಕೆಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು,ಈಗ ಕೇರಳದಲ್ಲಿ ಆಕೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭೀಮಾನಗರ ಪೊಲೀಸರು ಕಳೆದೊಂದು ವಾರದಿಂದ ದಿವ್ಯಾ ವಸಂತ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು.

ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದ ದಿವ್ಯಾ
ಮೊದಲು ತಮಿಳುನಾಡಿಗೆ ಪರಾರಿಯಾಗಿದ್ದರು.

ನಂತರ ಅಲ್ಲಿಂದ ಕೇರಳಕ್ಕೆ ತೆರಳಿದ್ದರು,ಖಚಿತ ಮಾಹಿತಿ ಮೇರೆಗೆ ಕೇರಳದಲ್ಲೇ ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಈ ಮುಂಚೆ ಪೊಲೀಸರು ಮೂವರನ್ನು ಬಂಧಿಸಿದ್ದರು.

ಖಾಸಗಿ ಸುದ್ದಿವಾಹಿನಿ ಸಿಇಒ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಶ್ರೀಮಂತರು, ಮಸಾಜ್ ಪಾರ್ಲರ್‌ಗಳು ಹಾಗೂ ವೈದ್ಯರೇ ಈ ಗ್ಯಾಂಗ್‌ನ ಟಾರ್ಗೆಟ್. ಹನಿಟ್ರ್ಯಾಪ್ ರೀತಿ ಹಣವುಳ್ಳವರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿತ್ತು.

ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು,ಇದೀಗ ದಿವ್ಯಾಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.


Share this with Friends

Related Post