Thu. Dec 26th, 2024

ಸಿದ್ದರಾಮಯ್ಯ ಸರ್ವಾಧಿಕಾರಿ, ಅಹಂಕಾರಿ ಭ್ರಷ್ಟಾಚಾರಿ:ಜೋಶಿ ವಾಗ್ದಾಳಿ

Share this with Friends

ಬೆಂಗಳೂರು,ಜು.13: ಮೈಸೂರು ಮುಡಾ ಹಗರಣವನ್ನು ಖಂಡಿಸಿ ಪ್ರತಿಭಟಿಸುವ ಹಕ್ಕೂ ನಮಗಿಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಾರವಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

1975ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿದ್ದರು. ಇದೀಗ ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಅಹಂಕಾರಿ ಮತ್ತು ಭ್ರಷ್ಟರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ಗೆ ಏನಾದರೂ ಕಮಾಂಡ್ ಇದ್ದರೆ ಸಿದ್ದರಾಮಯ್ಯರನ್ನು ತಕ್ಷಣ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯರ ನೇರ ತನಿಖೆ ಆಗಬೇಕು ಅವರ ಪಾಲ್ಗೊಳ್ಳುವಿಕೆ ಇಲ್ಲದೇ ಇಂಥ ದೊಡ್ಡ ಭ್ರಷ್ಟಾಚಾರ ಆಗಲು ಸಾಧ್ಯವಿಲ್ಲ, ಮೈಸೂರು ಅವರ ತವರೂರು, ಈ ಹಗರಣಕ್ಕೆ ಅವರೇ ನೇರ ಹೊಣೆ ಎಂದು ತಿಳಿಸಿದರು.

ವಾಲ್ಮೀಕಿ ಹಗರಣ ಕುರಿತು ಪ್ರತಿಕ್ರಿಯಿಸಿದ ಅವರು, ಇಡಿ, ಸಿಬಿಐ ತನಿಖೆ ಮಾಡಲು ಮುಂದಾದಾಗ ನಿಗಮದ ಅಧ್ಯಕ್ಷರು ಎಸ್‍ಐಟಿ ಮುಂದೆ ಶರಣಾಗಿದ್ದಾರೆ. ಸಿದ್ದರಾಮಯ್ಯನವರು ಹಣಕಾಸಿನ ಸಚಿವರಾಗಿದ್ದು, ಆರೋಪಿಗಳನ್ನು ಅವರು ಅತ್ಯಂತ ಸಮರ್ಪಕವಾಗಿ ರಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಡ ಎಸ್‍ಟಿ ಜನಾಂಗದ ಅಭಿವೃದ್ಧಿಗಾಗಿ ಇದ್ದ ವಾಲ್ಮೀಕಿ ನಿಗಮದ ದುಡ್ಡನ್ನು ಇವರು ದುರುಪಯೋಗ ಮಾಡಿದ್ದಾರೆ.187 ಕೋಟಿ ರೂಪಾಯಿಯಲ್ಲಿ ಐಶಾರಾಮಿ ಕಾರು ಖರೀದಿ ಸೇರಿದಂತೆ ಇತರ ಉದ್ದೇಶಕ್ಕೆ ಬಳಸಿದ್ದಾರೆ. ಇದರ ವಿರುದ್ಧ ಪ್ರತಿಭಟಿಸುತ್ತಿದ್ದ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು, ಬಿಜೆಪಿ ಶಾಸಕರು ಮತ್ತು ಅನೇಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಹಾಗಾದರೆ ನಮಗೆ ಪ್ರತಿಭಟಿಸುವ ಹಕ್ಕಿಲ್ಲವೆ‌ ಎಂದು ಕಿಡಿಕಾರಿದರು.

ಈ ಸರ್ಕಾರ ಅಧಿಕಾರಕ್ಕೆ ಬಂದ ಒಂದೆರಡು ತಿಂಗಳ ಆಡಳಿತ ಅವಧಿಯಲ್ಲೇ ಭ್ರಷ್ಟಾಚಾರ ಶುರುವಾಗಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುವುದನ್ನು ಅವರ ಪಕ್ಷದ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ, ಸಂವಿಧಾನದ ಪ್ರತಿಯನ್ನು ಹಿಡಿದು ಮಾತನಾಡುವ ರಾಹುಲ್ ಗಾಂಧಿಯವರು ಈ ಹಗರಣಗಳ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ನೇತೃತ್ವದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವವರೆಗೆ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಜೋಶಿ ತಿಳಿಸಿದರು.


Share this with Friends

Related Post