Sat. Nov 2nd, 2024

ಕಾಂಗ್ರೆಸ್ ಸರ್ಕಾರದ ವಿರುದ್ಧ ‌ಬಿಜೆಪಿ ಶಾಸಕರ ಪ್ರತಿಭಟನೆ

Share this with Friends

ಬೆಂಗಳೂರು,ಜು.15: ಮುಡಾ, ವಾಲ್ಮೀಕಿ ನಿಗಮ,ವಕ್ಫ್ ಬೋರ್ಡ್ ಹಗರಣ,ಎಸ್ ಸಿ,ಎಸ್ ಟಿ ನಿಧಿ ಬಳಕೆ,ಸೇರಿದಂತೆ ರಾಜ್ಯಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಶಾಸಕರು ತುಂತುರು ಮಳೆಯ ನಡುವೆಯೇ ವಿಧಾನಸೌಧದ ಬಳಿಯ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಧರಣಿ ನಡೆಸಿದರು.

ಸರ್ಕಾರವನ್ನು ಖಂಡಿಸುವ ಬ್ಯಾನರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದ ಶಾಸಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ,ಸರ್ಕಾರ ದಲಿತರು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಕರ್ನಾಟಕ ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿಜೆಪಿ ಇದರ ವಿರುದ್ಧ ಹೋರಾಟ ಮುಂದುವರೆಸಲಿದೆ ಸ್ಪಷ್ಟಪಡಿಸಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ತನಿಖೆಯಿಂದ ಲೋಕಸಭೆ ಚುನಾವಣೆಯಲ್ಲಿ ಹಣ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಮುಡಾದಲ್ಲಿ ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾಗಿದ್ದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ದೊಡ್ಡವರು ಕಬಳಿಸಿದ್ದಾರೆ.

ಮುಡಾ ಹಗರಣದ ತನಿಖೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ತನಿಖಾ ಆಯೋಗವನ್ನು ರಚಿಸುವ ರಾಜ್ಯ ಸರ್ಕಾರದ ಆದೇಶವನ್ನು ಬಿಜೆಪಿ ಒಪ್ಪುವುದಿಲ್ಲ‌ ಎಂದು ಹೇಳಿದರು.

ಸಿಬಿಐ ತನಿಖೆಯೇ ಆಗಬೇಕು,ಇದರಿಂಯ ಸತ್ಯಾಂಶ ಹೊರಬರುತ್ತದೆ,ಇದರ ಅರಿವು ಮುಖ್ಯಮಂತ್ರಿಗೆ ಇರುವುದರಿಂದಲೇ ಅವರು ಒಪ್ಪುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.


Share this with Friends

Related Post