Mon. Dec 23rd, 2024

ಗೊಂದಲ ಮೂಡಿಸುತ್ತಿದ್ದವರಿಗೆ ಉತ್ತರ ಸಿಕ್ಕಿದೆ: ಯದುವೀ‌ರ್

Share this with Friends

ಮೈಸೂರು,ಜು.18: ನಾನು ರಾಜಕೀಯಕ್ಕೆ ಕಾಲಿಟ್ಟಾಗ ರಾಜರು ಕೈಗೆ ಸಿಗುವರೇ ಎಂದು ಕೆಲವರು ಗೊಂದಲ ಮೂಡಿಸುತ್ತಿದ್ದರು. ಆದರೆ, ಈಗ ಅದಕ್ಕೆಲ್ಲ ಉತ್ತರ ದೊರೆತಿದೆ ಎಂದು ಸಂಸದ ಯದುವೀ‌ರ ಕೃಷ್ಣದತ್ತ ಚಾಮರಾಜ ಒಡೆಯ‌ರ್ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಬ್ರಾಹ್ಮಣ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಾರಂಪರಿಕ ಇತಿಹಾಸವುಳ್ಳ ಮೈಸೂರು-ಕೊಡಗು ಕ್ಷೇತ್ರವನ್ನು ಉಳಿಸುವ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಮೈಸೂರಿನಲ್ಲಿ ಏರ್‌ಪೋರ್ಟ್ ಅಭಿವೃದ್ಧಿ ಕೆಲಸ ವೇಗವಾಗಿ ನಡೆಯಬೇಕಿದ್ದು, ಅದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ ಈಗ ನಮ್ಮ ರಾಜರನ್ನು ನಾವು ಹತ್ತಿರದಿಂದ ನೋಡಬಹುದು. ಯದುವೀರ್ ಅವರು 1.39 ಲಕ್ಷ ಮತಗಳ ಅಂತರದಲ್ಲಿ ಜಯಶೀಲರಾಗಿದ್ದು, ಮೈಸೂರಿನಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ರಾಷ್ಟ್ರೀಯ ನಾಯಕರ ನಿರ್ಧಾರದ ಫಲವಾಗಿ ಈ ಜಯ ದೊರೆತಿದೆ ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಡಿ.ಟಿ.ಪ್ರಕಾಶ್ ಮಾತನಾಡಿ, ನಮ್ಮ ಹೊಸ ಸಂಸದರಿಗೆ ನಮ್ಮ ಸಮುದಾಯದ ಯುವಕರು ಬೆಂಬಲವಾಗಿದ್ದರು,ಅನೇಕ ಮೊಹಲ್ಲಾದಲ್ಲಿ ಒಂದೊಂದು ಬ್ರಾಹ್ಮಣ ಸಂಘವಿದ್ದು, ನಮ್ಮ
ಸಮುದಾಯದವರು
ಸರ್ಕಾರದ ಸೌಲಭ್ಯಗಳಿಂದ
ವಂಚಿತರಾಗಿದ್ದಾರೆ. ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ.ಲಕ್ಷ್ಮೀ, ನಗರಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮಪ್ರಸಾದ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ.ನಿಶಾಂತ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷೆ ಪುಷ್ಪ ಅಯ್ಯಂಗಾರ್, ಹೊಯ್ಸಳ ಕರ್ನಾಟಕದ ಅಧ್ಯಕ್ಷ ಕೆ.ಆ‌ರ್. ಸತ್ಯನಾರಾಯಣ, ಎಂ ಆರ್ ಬಾಲಕೃಷ್ಣ, ಹರೀಶ್,ಲತಾ ಬಾಲಕೃಷ್ಣ, ಜ್ಯೋತಿ, ನಾಗಶ್ರೀ, ಕಡಕೋಳ ಜಗದೀಶ್ ಉಪಸ್ಥಿತರಿದ್ದರು.


Share this with Friends

Related Post