Mon. Dec 23rd, 2024

ರಾಮನಗರ ಜಿಲ್ಲೆಗೆ ಮರು ನಾಮಕರಣ:ಹೆಚ್.ಡಿ.ಕೆ ಗೆ ಡಿಕೆಶಿ ಟಾಂಗ್

Share this with Friends

ಬೆಂಗಳೂರು, ಜು.27: ಮತ್ತೆ ಅಧಿಕಾರಕ್ಕೆ ಬಂದು ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡುವುದು ಎಚ್. ಡಿ ಕುಮಾರಸ್ವಾಮಿ ಅವರ ಹಣೆಯಲ್ಲಿ ಬರೆದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಟಾಂಗ್ ನೀಡಿದರು.

ವಿಧಾನಸೌಧ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ರಾಮನಗರ ಜಿಲ್ಲೆ ಮತ್ತು ಅಲ್ಲಿನ ಜನರ ಬದುಕು, ಅಭಿವೃದ್ಧಿ ಬಗ್ಗೆ ನಾವು ಚಿಂತನೆ ಮಾಡಿಯೇ ಮರು ನಾಮಕರಣ ಮಾಡಿದ್ದೇವೆ ಎಂದು ಹೇಳಿದರು.

2028ಕ್ಕೆ ನಾವು ಮತ್ತೆ ಅಧಿಕಾರಕ್ಕೆ ಬಂದು ರಾಮನಗರ ಹೆಸರನ್ನು ಮರು ನಾಮಕರಣ ಮಾಡುವುದಾಗಿ ಇತ್ತೀಚೆಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅದು ಅವರ ಹಣೆಯಲ್ಲಿ ಬರೆದಿಲ್ಲ ಆಗ ಕೂಡ ನಮ್ಮ ಪಕ್ಷವೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿಯವರಿಗೆ ಸದಾ ನನ್ನದೇ ಚಿಂತೆ, ಮಲಗಿ ಎದ್ದ ಕೂಡಲೇ ಅವರಿಗೆ ನಮ್ಮ ವಿಚಾರವೇ ನೆನಪಿಗೆ ಬರುತ್ತದೆ ಎಂದು ವ್ಯಂಗ್ಯ ವಾಡಿದರು.

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸಚಿವ ಸಂಪುಟ ಸಭೆಯಲ್ಲ ಮರು ನಾಮಕರಣ ಮಾಡಿದ್ದೇವೆ, ಆದರೆ ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರೆಯುತ್ತದೆ ನಾವು ಅದನ್ನು ಯತಾ ಸ್ಥಿತಿಯಲ್ಲಿ ಉಳಿಸಿದ್ದೇವೆ ಎಂದು ತಿಳಿಸಿದರು.

ಹೊರಗಿನಿಂದ ಬಂದು ಅಕ್ರಮ ಮಾಡಲು ರಾಜಕೀಯದಲ್ಲಿ ಅವಕಾಶವೇನೊ ಇದೆ, ಆದರೆ ರಾಮನಗರ ನಮ್ಮದು. ಈ ಹಿಂದೆ ಕೆಂಗಲ್ ಹನುಮಂತಯ್ಯನವರು ಬೆಂಗಳೂರಿನಲ್ಲಿ ವಿಧಾನಸೌಧ ಕಟ್ಟಿದರು. ರಾಮಕೃಷ್ಣ ಹೆಗಡೆ ಹೆಚ್. ಡಿ ದೇವೇಗೌಡರು ಎಚ್. ಡಿ ಕುಮಾರಸ್ವಾಮಿ ಅವರು ಕೂಡ ಬೆಂಗಳೂರು ಜಿಲ್ಲೆಯಿಂದಲೇ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದಾರೆ ಎಂದು ಹೇಳಿದರು.

ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಈ ಎಲ್ಲಾ ತಾಲೂಕುಗಳ ಜನರು ನಮ್ಮವರೇ. ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಪೂರಕವಾಗಿ ಮರುನಾಮಕರಣ ಮಾಡಿದ್ದೇವೆ, ಇವುಗಳನ್ನು ಉನ್ನತ ಮಟ್ಟಕ್ಕೆ ಏರಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post