ವಯನಾಡು,ಆ.2: ಭೂಕುಸಿತ ಸಂಭವಿಸಿದ್ದ ಚೂರಲ್ಮಲ ಮತ್ತು ಮುಂಡಕ್ಕೈಗೆ ಸಂರ್ಪಕ ಕಲ್ಪಿಸಲು ಚಾರಲ್‌ಮಲೈ ನದಿಗೆ ಅಡ್ಡಲಾಗಿ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ಕೇವಲ 16 ಗಂಟೆಯಲ್ಲಿ ಪೂರ್ಣಗೊಳಿಸಿ ದಾಖಲೆ ಮಾಡಿದೆ.
ಜುಲೈ 31 ರ ರಾತ್ರಿ 9 ಗಂಟೆಗೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 1 ರ ಸಂಜೆ 5.30ಕ್ಕೆ ಪೂರ್ಣಗೊಳಿಸಿದ್ದು,ಈ ಸೇತುವೆ 24 ಟನ್ ತೂಕದ ಸಾಮರ್ಥ್ಯ ಹೊಂದಿದೆ.
ಎಲ್ಲಾ ರೀತಿಯ ಸವಾಲುಗಳನ್ನು ಮೀರಿ, ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ ತಂಡ ಈ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ.
ಈ ಸೇತುವೆ ನಿರ್ಮಾಣವನ್ನು ಮಧ್ಯಾಹ್ನ 12 ಗಂಟೆಯ ಒಳಗಡೆ ಪೂರ್ಣಗೊಳಿಸಲು ಸೇನೆ ಟಾರ್ಗೆಟ್ ಹಾಕಿಕೊಂಡಿತ್ತು.ಆದರೆ ಭಾರೀ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದ್ದರೂ ಸೇನೆಯ ಎಂಜಿನಿಯರ್‌ಗಳು ದಾಖಲೆಯ ಅವಧಿಯಲ್ಲೇ ಸೇತುವೆ ನಿರ್ಮಿಸಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ.ಇದು ತಾತ್ಕಾಲಿಕ ಸೇತುವೆಯಾಗಿದ್ದು ಉಕ್ಕಿನ ತುಂಡುಗಳನ್ನು ಜೋಡಿಸಿ ನಿರ್ಮಾಣ ಮಾಡಲಾಗಿದೆ.
ಜೆಸಿಬಿಗಳು, ಅಂಬುಲೆನ್ಸ್‌ಗಳು, ರಕ್ಷಣಾ ಪಡೆ ಎಲ್ಲರೂ ಈ ಸೇತುವೆಯ ಮೂಲಕವೇ ಸಾಗುತ್ತಿದ್ದು,ಕಾರ್ಯಾಚರಣೆ ಚುರುಕುಗೊಂಡಿದೆ.