Fri. Nov 1st, 2024

10 ತಿಂಗಳು ಮುಂದುವರೀರಿ ನೋಡೋಣ:ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ.ಕೆ ಸವಾಲು

Share this with Friends

ಬೆಂಗಳೂರು,ಆ.3: ಇನ್ನೂ10 ವರ್ಷ ನಮ್ಮದೇ ಸರಕಾರ ಎಂದು ಕಾಂಗ್ರೆಸ್ ನವರು ಬೀಗುತ್ತಿದ್ದಾರೆ,ಹತ್ತು ವರ್ಷ ಇರಲಿ,ಹತ್ತು ತಿಂಗಳು ಅಧಿಕಾರದಲ್ಲಿರಲಿ ನೋಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲು ಹಾಕಿದರು.

ಬೆಂಗಳೂರಿನಿಂದ ಮೈಸೂರಿನವರೆಗೆ ಜೆಡಿಎಸ್, ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆ ನಂತರ ಅವರು ಮಾತನಾಡಿದರು.

ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ, ಈಗ ಜೆಡಿಎಸ್ ಬಿಜೆಪಿ ಯನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ ಎಂದು ಗುಡುಗಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ. ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರಕಾರವನ್ನು ಕಾಣುತ್ತಿದ್ದೇವೆ ಎಂದು ಹೆಚ್.ಡಿ.ಕೆ ಆರೋಪಿಸದರು.

ಕಾಂಗ್ರೆಸ್ ಜನ ವಿರೋಧಿ ಸರಕಾರದ ವಿರುದ್ಧ ನಾವು ಜಂಟಿ ಹೋರಾಟ ಹಮ್ಮಿಕೊಂಡಿದ್ದೇವೆ ಜನರಿಗೆ ಇವರ ಆಕ್ರಗಳನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ದೇವೆಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದಾಗಿ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ,ಅದಕ್ಕೆ ಉತ್ತರ ಕೊಡುತ್ತೇವೆ,ನಾವೂ ಕೂಡ ಅವರದ್ದು ಆಸ್ತಿ ಎಷ್ಟಿದೆ ಎಂಬುದನ್ನು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿ ಎನ್ನುತ್ತಾರೆ. ಇವರು ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ, ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಹೆಚ್ ಡಿ ಕೆ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸಚಿವ ಡಾ.ಪರಮೇಶ್ವರ್ ಅವರು ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ, ಅವರು ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಯಾದಗಿರಿಯಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರು ಏಕೆ ಜೀವ ಕಳೆದುಕೊಂಡರು ಉತ್ತರಿಸಿ ಎಂದು ಕುಮಾರಸ್ವಾಮಿ ಕೇಳಿದರು.

ಬದುಕು ಕೊನೆ ಮಾಡಿಕೊಂಡ ಆ ಪೊಲೀಸ್ ಅಧಿಕಾರಿಯ ಪತ್ನಿ ಪೋಸ್ಟಿಂಗ್ ಗೆ 25 ಲಕ್ಷ ರೂ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಾಗಾದರೆ ಆಕೆ ಯಾರ ವಿರುದ್ಧ ಆರೋಪ ಮಾಡಿದ್ದಾರೆ ಅದರ ಬಗ್ಗೆ ಪರಮೇಶ್ವರ್ ಅವರು ಉತ್ತರ ಕೊಡಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.


Share this with Friends

Related Post