ಮೈಸೂರು,ಆ.4: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಮೈಸೂರು 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಆವರ್ತಿ ಗ್ರಾಮದ ವಾಸಿ ಕುಮಾರ(42) ಶಿಕ್ಷೆಗೆ ಗುರಿಯಾದ ಆರೋಪಿ.
27-4- 2022 ರಂದು ಪ್ರಕರಣದ 19 ವರ್ಷದ ಸಂತ್ರಸ್ತ ಬುದ್ಧಿಮಾಂದ್ಯ ಮಹಿಳೆಯು ತನ್ನ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ವಾಸವಿದ್ದಳು.
ಆಗ ಮನೆಗೆ ಆರೋಪಿ ಕುಮಾರ ನುಗ್ಗಿ ಸಂತ್ರಸ್ತೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ.
ಈ ಬಗ್ಗೆ ಆತನ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಹಿಂದಿನ ತನಿಖಾಧಿಕಾರಿಯಾಗಿದ್ದ ಬೈಲಕುಪ್ಪೆ ವೃತ್ತದ ಸಿಪಿಐ ಪ್ರಕಾಶ್ ಅವರು ಆರೋಪಿ ವಿರುದ್ಧ ತನಿಖೆ ಕೈಗೊಂಡು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ ಅವರು,ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳು ಮತ್ತು ಸಂತ್ರಸ್ತ ಮಹಿಳೆಯ ಸಾಕ್ಷಿಯನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 10 ವರ್ಷಗಳ ಕಠಿಣ ಸಜೆ ಮತ್ತು 50,000 ರೂ ದಂಡ
ಮತ್ತು 6 ತಿಂಗಳ ಕಠಿಣ ಸೆರೆಮನೆವಾಸ ವಿಧಿಸಿ ತೀರ್ಪು ನೀಡಿದರು.
ಸಂತ್ರಸ್ತ ಮಹಿಳೆಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶಿಸಿದರು.
ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ಅವರು ಸರ್ಕಾರದ ಪರ ವಾದ ಮಂಡಿಸಿದರು.