Tue. Dec 24th, 2024

ವಯನಾಡಿನ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಅಕ್ಷಯ ಪಾತ್ರ ಫೌಂಡೇಶನ್

Share this with Friends

ಬೆಂಗಳೂರು,ಆ.6: ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದಿಂದ ಸಂಕಷ್ಟಕ್ಕೀಡಾಗಿರುವವರ ನೆರವಿಗೆ
ಅಕ್ಷಯ ಪಾತ್ರ ಫೌಂಡೇಶನ್ ಧಾವಿಸಿ ಇತರರಿಗೆ ಮಾದರಿಯಾಗಿದೆ.

ಕರ್ನಾಟಕ ಮೂಲದ ಅಕ್ಷಯ ಪಾತ್ರ ಫೌಂಡೇಶನ್ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಂಕಷ್ಟಕ್ಕೆ ಈಡಾಗಿರುವ ಜನರಿಗೆ ಪರಿಹಾರ ಕಾರ್ಯ ಪ್ರಾರಂಭಿಸಿದ್ದು ನೊಂದವರ ಕಣ್ಣೀರು ಒರೆಸಲು ಶ್ರಮಿಸುತ್ತಿದೆ.

ಕರ್ನಾಟಕ ಸರ್ಕಾರದ ನೆರವಿನಿಂದ ನಡೆಯುತ್ತಿರುವ ಈ ಕಾರ್ಯಾಚಾರಣೆ ಮೂಲಕ ಸಂತ್ರಸ್ತರಿಗೆ ದಿನಸಿ ಕಿಟ್ ಗಳನ್ನು ನೀಡಲಾಗುತ್ತಿದೆ.

ಅಕ್ಷಯ ಫೌಂಡೇಶನ್ ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ 1,000 ದಿನಸಿ ಕಿಟ್‌ಗಳನ್ನು ವಿತರಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ 9,000 ಕಿಟ್‌ಗಳನ್ನು ತಲುಪಿಸಲು ಸಿದ್ಧತೆ ಮಾಡಿಕೊಂಡಿದೆ.

ಈ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಕಡಲೆಕಾಯಿ, ಅಡುಗೆ ಎಣ್ಣೆ, ಸಾಂಬಾರ್ ಪೌಡರ್, ಅರಿಶಿನ ಪುಡಿ, ಸಕ್ಕರೆ, ಉಪ್ಪು, ಬಿಸ್ಕತ್ತುಗಳು ಮತ್ತು ಓಆರ್‌ಎಸ್ ಪ್ಯಾಕೆಟ್‌ ನಂತಹ ಅಗತ್ಯ ವಸ್ತುಗಳಿವೆ.

ಒಂದು ದಿನಸಿ ಕಿಟ್ ಪೌಷ್ಠಿಕಾಂಶ ಭರಿತ 42 ಊಟಗಳನ್ನು ಒದಗಿಸಲಿದೆ ಎಂದು ಅಂದಾಜಿಸಲಾಗಿದ್ದು, ಮೂರು ಜನ ಇರುವ ಒಂದು ಕುಟುಂಬವು ಕನಿಷ್ಠ ಒಂದು ವಾರ ಈ ದಿನಸಿ ಕಿಟ್ ಬಳಸಿ ಊಟ ಮಾಡಬಹುದಾಗಿದೆ.

ಆಗಸ್ಟ್ 8ರ ವೇಳೆಗೆ 4000 ಕಿಟ್ ಗಳನ್ನು ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ತಿಳಿಸಿದ್ದಾರೆ.

ಒಟ್ಟಾರೆ ಅಕ್ಷಯ ಪಾತ್ರ ಫೌಂಡೇಶನ್ 10,000 ದಿನಸಿ ಕಿಟ್ ಗಳನ್ನು ವಿತರಿಸುವ ಮೂಲಕ ಒಟ್ಟು 5 ಲಕ್ಷ ಊಟ ಒದಗಿಸಿ ಸಂತ್ರಸ್ತರ ನೋವಿಗೆ ಹೆಗಲು ಕೊಡುವ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಕಲ್ಪೆಟ್ಟಾದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ನಮ್ಮ ಫೌಂಡೇಶನ್ ನ ತಂಡ ಬೀಡು ಬಿಟ್ಟಿದ್ದು, ಎಲ್ಲಾ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಡೆಸುತ್ತಿದೆ,ಜಿಲ್ಲಾಧಿಕಾರಿಗಳನ್ನು ಒಳಗೊಂಡು ಸ್ಥಳೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಇದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಬೇಯಿಸಿದ ಊಟವನ್ನು ನೀಡುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಚಂಚಲಪತಿ ದಾಸ್‌ ತಿಳಿಸಿದ್ದಾರೆ.


Share this with Friends

Related Post