Fri. Nov 1st, 2024

ಬಿಬಿಎಂಪಿಯಲ್ಲಿ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ

Share this with Friends

ಬೆಂಗಳೂರು, ಫೆ.17: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ ಇಂದು ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಯಿತು.

ಕರ್ನಾಟಕ ಸಾಂಸ್ಕೃತಿಕ ನಾಯಕ ರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಅಡಿಬರಹವಿರುವ ಭಾವಚಿತ್ರವನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶಿವಾನಂದ ಕಲ್ಕೆರೆ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪ್ರತಿಭಾ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಲಕ್ಷ್ಮಿದೇವಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ನಾಲ್ಕು ದಿನಗಳ ಹಿಂದೆ ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬ ಮೊಳಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಬಸವಣ್ಣನವರ ಭಾವಚಿತ್ರವನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಅನಾವರಣ ಮಾಡಿದ ವೇಳೆ ಸಿಎಂ ಮಾತನಾಡಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇದೇ 17ರಂದು ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗುವುದು ಎಂದು ಹೇಳಿದ್ದರು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರು ಹಾಗೂ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಆಯಾ ಸಂಸ್ಥೆಯ ಅಧ್ಯಕ್ಷರಿಂದ ಈ ಕಾರ್ಯ ನೆರವೇರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ಮನುಷ್ಯನು ಮನುಷ್ಯನನ್ನು ಪ್ರೀತಿಸಬೇಕು, ದ್ವೇಷಿಸುವುದು ದುರ್ಗುಣ. ಬಸವಣ್ಣ ಸಾಂಸ್ಕೃತಿಕ ನಾಯಕ ಎನ್ನುವುದು ಅತ್ಯಂತ ಯೋಗ್ಯವಾಗಿದೆ, ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರ ಇರಬೇಕು ಎಂದು ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗಿದೆ.


Share this with Friends

Related Post