Wed. Dec 25th, 2024

ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಕೊರತೆ:ನ್ಯಾಯಾಧೀಶರ ಆತಂಕ

Share this with Friends

ಮೈಸೂರು,ಆ.7: ಮೈಸೂರಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಭೇಟಿ ನೀಡಿ ಮೂಲಭೂತ ಸೌಕರ್ಯ, ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯ ರಾಜ್ಯ ಸಮಿತಿಯ ಅಧ್ಯಕ್ಷರಾದ ವಿಶ್ರಾಂತ ನ್ಯಾಯಾಮೂರ್ತಿಗಳ ನಿರ್ದೇಶನದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮೈಸೂರು ನಗರದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಬಿ.ಜಿ. ಅವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಸಾಥ್ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಕಂಡು ಆತಂಕ ವ್ಯಕ್ತಪಡಿಸಿದರು.

ಮೈಸೂರು ನಗರದಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಸಮುದಾಯ ಭವನ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶುದ್ಧ ಗಾಳಿ, ಬೆಳಕು, ಕುಡಿಯುವ ನೀರಿನ ಕೊರತೆ ಕಂಡುಬಂದಿತು.

ಕಟ್ಟಡಗಳು ಶಿಥಿಲ ಗೊಂಡಿದ್ದು, ಮಳೆ ನೀರು ಸೋರಿಕೆಯಾಗುತ್ತದೆ. ಇನ್ನು ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಹೆಗ್ಗಣಗಳು ಬಿಲಾ ತೋಡಿ ಕಟ್ಟಡದ ನೆಲಹಾಸು ಹಾಳಾಗಿದೆ, ಇದರಿಂದ ಅಹಾರ ಸಂರಕ್ಷಣೆಗೆ ತೊಡಕುಂಟಾಗಿರುವುದು ಕಂಡು ಬಂದಿತು.

ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಧೀಶರು ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ತಯಾರಿಸುವ ಆಹಾರದಲ್ಲಿ ಪೋಶಕಾಂಶದ ಕೊರತೆ, ಮಕ್ಕಳಿಗೆ ತಯಾರಿಸುವ ಲಡ್ಡು ಹಾಗೂ ಸಾಂಬಾರು ಮಾಡಲು ಉಪಯೋಗಿಸುವ ಬೇಳೆ, ಕಾಳುಗಳು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಕಂಡು ನ್ಯಾಯಾಧೀಶರು‌ ಬೇಸರ ವ್ಯಕ್ತಪಡಿಸಿದರು.

ಕಳಪೆ ಆಹಾರ ಪದಾರ್ಥಗಳನ್ನು ತಕ್ಷಣ ವಾಪಸ್ಸು ಕಳುಹಿಸಿ ಉತ್ತಮ ಅಹಾರ ಪದಾರ್ಥಗಳು ಪಡೆಯುವಂತೆ ನಿರ್ದೇಶಿಸಿದರು.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ಮೇಲ್ವಿಚಾರಕರಿಗೆ ಅಂಗನವಾಡಿ ಕೇಂದ್ರಗಳನ್ನು ಹೇಗೆ ನಿಭಾಹಿಸಬೇಕು ಮತ್ತು ಸರ್ಕಾರದ ಆಶಾಯ, ಉದ್ದೇಶಗಳನ್ನು ಮನವರಿಕೆ ಮಾಡಿಕೊಟ್ಟರಲ್ಲದೆ ಮೂಲ ಸೌಕರ್ಯಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಶೂಶ್ರೂಷಕರು,ಪೊಲೀಸ್ ಠಾಣೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸುವಂತೆ ನ್ಯಾಯಾಧೀಶರು ಸೂಚಿಸಿದರು.


Share this with Friends

Related Post